ಬೆಂಗಳೂರು: ಬಾಡಿಗೆ ತಾಯಿ ಮೂಲಕ ಮಗುವನ್ನು ಮಾಡಿಸಿಕೊಡುತ್ತೇನೆಂದು ದಂಪತಿಯನ್ನು ವಂಚಿಸಿ ಬೇರೊಬ್ಬ ಮಹಿಳೆಯ ಮಗುವನ್ನು ಕದ್ದು ಅವರಿಗೆ ನೀಡಿದ ಅಪರೂಪದ ಪ್ರಕರಣವೊಂದರಲ್ಲಿ ಬೆಂಗಳೂರಿನ ಮನೋವೈದ್ಯೆಗೆ 10 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
2020 ರಲ್ಲಿ ಬಿಬಿಎಂಪಿ ಆಸ್ಪತ್ರೆಯಿಂದ ನವಜಾತ ಶಿಶುವನ್ನು ಅಪಹರಿಸಿದ್ದ ವೈದ್ಯೆ, ಮತ್ತೊಂದು ದಂಪತಿಯಿಂದ 14.5 ಲಕ್ಷ ಪಡೆದು ಅವರಿಗೆ ನೀಡಿದ್ದರು. ಶಿಕ್ಷೆಗೆ ಒಳಗಾಗಿರುವ ವೈದ್ಯೆ ಬೆಂಗಳೂರಿನ ನಾಗರಭಾವಿಯ ರಶ್ಮಿ ಎಂಬುವವರಾಗಿದ್ದಾರೆ.
ಜಡ್ಜ್ ಸಿಬಿ ಸಂತೋಷ್ ಅವರು ತೀರ್ಪು ಪ್ರಕಟಿಸಿದ್ದು, ಇದೇ ವೇಳೆ ವೈದ್ಯೆ ರಶ್ಮಿ ನ್ಯಾಯಾಲಯದಲ್ಲಿ ಹಾಜರಿದ್ದರು. ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ರಶ್ಮಿ, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅವರನ್ನು ತೀರ್ಪು ಪ್ರಕಟವಾದ ಬೆನ್ನಲ್ಲೇ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.
ಬಾಣಂತಿಗೆ ಔಷಧ ಕೊಟ್ಟು, ಮಗು ಕಳವು
2020 ರ ಮೇ 29 ರಂದು ಚಾಮರಾಜಪೇಟೆಯ ಬಿಬಿಎಂಪಿ ಆಸ್ಪತ್ರೆಯಿಂದ ನವಜಾತ ಶಿಶುವನ್ನು ಕದ್ದೊಯ್ಯಲಾಗಿತ್ತು. ಆಗ ತಾನೇ ಹೆರಿಗೆಯಾಗಿದ್ದ ಮಗುವಿನ ತಾಯಿ ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಂಡ ನಂತರ ನಿದ್ರೆಗೆ ಜಾರಿದ್ದರು. 45 ನಿಮಿಷಗಳ ನಂತರ ಎಚ್ಚರವಾದಾಗ, ಮಗು ಕಾಣೆಯಾಗಿತ್ತು. ನಂತರ ಆ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಆದರೆ, ಮಗುವನ್ನು ಪತ್ತೆ ಹಚ್ಚಿ ರಶ್ಮಿಯನ್ನು ಬಂಧಿಸಲು ಸುಮಾರು ಒಂದು ವರ್ಷ ಬೇಕಾಯಿತು.














