ಮನೆ ಕಾನೂನು ದಾಖಲೆ ಕಳವು: ಐಪಿಎಸ್ ಅಧಿಕಾರಿ‌ ರೂಪಾ ಮೌದ್ಗಿಲ್ ವಿರುದ್ಧ ಡಿಐಜಿ ವರ್ತಿಕಾ ದೂರು

ದಾಖಲೆ ಕಳವು: ಐಪಿಎಸ್ ಅಧಿಕಾರಿ‌ ರೂಪಾ ಮೌದ್ಗಿಲ್ ವಿರುದ್ಧ ಡಿಐಜಿ ವರ್ತಿಕಾ ದೂರು

0

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ವಿರುದ್ಧ ಇದೀಗ ಮತ್ತೋರ್ವ ಮಹಿಳಾ ಅಧಿಕಾರಿ ದೂರು ನೀಡಿದ್ದಾರೆ.

Join Our Whatsapp Group

ಕೆಳಹಂತದ ಸಿಬ್ಬಂದಿಗಳನ್ನು ಬಳಸಿಕೊಂಡು ದಾಖಲೆ ಕಳುವು ಮಾಡಿಸಿದ್ದು, ನನ್ನ ವಿರುದ್ಧ ಷಡ್ಯಂತ್ರ ನಡೆಯುವ ಸಾಧ್ಯತೆ ಇದೆ ಎಂದು ಡಿಐಜಿ ವರ್ತಿಕಾ ಕಟಿಯಾರ್ ಆರೋಪಿಸಿದ್ದಾರೆ. ಈ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ್ದಾರೆ.

ಫೆಬ್ರವರಿ 20 ರಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ವರ್ತಿಕಾ ದೂರು ದಾಖಲಿಸಿದ್ದಾರೆ. ಸೆಪ್ಟೆಂಬರ್ 6, 2024 ರಂದು ರೂಪಾ ಅವರ ಆದೇಶದ ಮೇರೆಗೆ ಹೆಡ್ ಕಾನ್ಸ್‌ಟೇಬಲ್ ಮಂಜುನಾಥ್ ಮತ್ತು ಗೃಹರಕ್ಷಕ ದಳದ ಮಲ್ಲಿಕಾರ್ಜುನ್ ಅನುಮತಿಯಿಲ್ಲದೆ ನನ್ನ ಕೊಠಡಿಗೆ ಪ್ರವೇಶಿಸಿದ್ದು, ದಾಖಲೆಗಳನ್ನು ಕಳವು ಮಾಡಿದ್ದಾರೆ.

ಮಲ್ಲಿಕಾರ್ಜುನ್ ಅವರು ನಿಯಂತ್ರಣ ಕೊಠಡಿಯಿಂದ ಕೀಲಿಯನ್ನು ತೆಗೆದುಕೊಂಡು ಕೊಠಡಿಯನ್ನು ತೆರೆದರೆ, ಮಂಜುನಾಥ್ ಫೈಲ್‌ಗಳ ಛಾಯಾಚಿತ್ರಗಳನ್ನು ತೆಗೆದುಕೊಂಡು ವಾಟ್ಸಾಪ್ ಮೂಲಕ ಐಜಿಪಿಗೆ ಕಳುಹಿಸಿದ್ದಾರೆ.

ಡಿಐಜಿ ಅವರ ಅರಿವಿಲ್ಲದೆ ಕೊಠಡಿಯನ್ನು ತೆರೆಯದಂತೆ ವರ್ತಿಕಾ ಅವರ ಆಪ್ತ ಸಹಾಯಕ ಕಿರಣ್ ಕುಮಾರ್ ಎಚ್ ಮಂಜುನಾಥ್ ಅವರಿಗೆ ಸೂಚಿಸಿದ್ದರು. ಆದರೆ, ಐಜಿಪಿ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್, ಫೈಲ್‌ಗಳ ಫೋಟೋಗಳನ್ನು ತೆಗೆದಿದ್ದಾರೆ. ಈ ವಿಷಯದ ಬಗ್ಗೆ ನನಗೆ ಇತ್ತೀಚೆಗಷ್ಟೇ ತಿಳಿದುಬಂದಿತ್ತು. ಬಳಿಕ ಕಿರಣ್, ಮಂಜುನಾಥ್ ಮತ್ತು ಮಲ್ಲಿಕಾರ್ಜುನ್ ಅವರನ್ನು ಪ್ರಶ್ನಿಸಿದಾಗ, ರೂಪಾ ಅವರ ಸೂಚನೆಯ ಮೇರೆಗೆ ಫೈಲ್‌ಗಳನ್ನು ತೆಗೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆಂದು ಹೇಳಿದ್ದಾರೆ.

ನನ್ನ ಕೊಠಡಿಯಲ್ಲಿ ಗೌಪ್ಯ ದಾಖಲೆಗಳು ಮತ್ತು ಅಧಿಕೃತ ದಾಖಲೆಗಳಿವೆ. ಕೆಲಸದ ಸಮಯದ ನಂತರ, ಸಂಬಂಧಪಟ್ಟ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಮತ್ತು ಅವರ ಅನುಮತಿಯಿಲ್ಲದೆ ಕೊಠಡಿಗೆ ಪ್ರವೇಶ ಮಾಡುವುದು ಗಂಭೀರ ಮತ್ತು ಅಕ್ಷಮ್ಯ ಅಪರಾಧ. ಈ ಹಿಂದೆ ಕೂಡ ಇದೇ ರೀತಿಯ ಘಟನೆಗಳು ನಡೆದಿರಬಹುದು. ಆದರೆ, ಇದೀಗ ನನ್ನ ಗಮನಕ್ಕೆ ಬಂದಿದೆ, ದಾಖಲೆಗಳ ಮೂಲಕ ರೂಪಾ ಅವರು ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುವ ಸಾಧ್ಯತೆಗಳಿವೆ. ಈ ಹಿಂದೆ ರೂಪಾ ನನ್ನ ವಾರ್ಷಿಕ ವರದಿಯನ್ನು ಹಾಳುಮಾಡುವುದಾಗಿ ಬೆದರಿಕೆ ಹಾಕಿದ್ದರು. ಡಿಐಜಿಗೆ ಡಿಜಿ ಮತ್ತು ಐಜಿಪಿ ಹುದ್ದೆಗೆ ಬಡ್ತಿ ನೀಡಿದಾಗ ನೋಡಿಕೊಳ್ಳುತ್ತೇನೆಂದು ಎಚ್ಚರಿಸಿದ್ದರು. ಇದೀಗ ನನ್ನ ಕೊಠಡಿಯಲ್ಲಿನ ದಾಖಲೆಗಳನ್ನು ಕಳವು ಮಾಡಿದ್ದು, ಯಾವುದೇ ರೀತಿಯ ಸಮಸ್ಯೆಗಳು ಎದುರಾದರೆ ಅದಕ್ಕೆ ರೂಪಾ ಅವರೇ ಹೊಣೆಗಾರರಾಗಿರುತ್ತಾರೆ. ಭವಿಷ್ಯದಲ್ಲಿಯೂ ಈ ರೀತಿಯ ಘಟನೆಗಳು ನಡೆಯುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ವರ್ತಿಕಾ ಅವರು ಆಗ್ರಹಿಸಿದ್ದಾರೆ.