ಮೈಸೂರು: ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಗ್ರಾಮ ಪಂಚಾಯತಿಯ ಎದುರಿನಲ್ಲಿರುವ ಮೋರಿ ಕಸ ಹಾಗೂ ತ್ಯಾಜ್ಯ ವಸ್ತುಗಳ ಕೊಂಪೆಯಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಡೆಂಗ್ಯೂ ಹರಡಿರುವ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಮೋರಿಯ ಪಕ್ಕದಲ್ಲಿಯೇ ತೆರೆದ ಒಳಚರಂಡಿ ಇದ್ದು, ಬೀದಿ ದೀಪವೂ ಇಲ್ಲದಿರುವುದರಿಂದ ರಾತ್ರಿ ಸಮಯದಲ್ಲಿ ಓಡಾಡುವ ಪಾದಾಚಾರಿಗಳು, ಹಾಗೂ ವಾಹನ ಸವಾರರು ಪ್ರಾಣ ಬೆದರಿಕೆಯಿಂದ ಓಡಾಡಬೇಕಿದೆ. ಸ್ವಲ್ಪ ಮೈಮರೆತರೂ ಜೀವಹಾನಿಯಾಗುವ ಸಂಭವವಿದೆ.
ದಿನ ನಿತ್ಯ ಗ್ರಾಮ ಪಂಚಾಯತಿಯ ಪಿಡಿಓ, ಅಧ್ಯಕ್ಷರು ಹಾಗೂ ಸದಸ್ಯರು ಮೋರಿಯ ಪಕ್ಕದಿಂದಲೇ ಗ್ರಾಪಂ ಕಾರ್ಯಾಲಯಕ್ಕೆ ತೆರಳಬೇಕು. ಆದರೂ ಕಂಡು ಕಾಣದಂತೆ ಇರುವ ಅಧಿಕಾರಿಗಳು ಇದರಲ್ಲಿ ಎಷ್ಟು ನೆಕ್ಕಿದ್ದಾರೂ ಆ ದೇವರೇ ಬಲ್ಲ.
ಸಾರ್ವಜನಿಕರಿಗೆ ಜೀವ ಹಾನಿ ಹಾಗೂ ಖಾಯಿಲೆ ತಂದೊಡ್ಡುವ ಮೋರಿಯನ್ನು ದಿನಂಪ್ರತಿ ನೋಡುತ್ತಿದ್ದರೂ ಕೂಡ ಕಂಡು ಸಹ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿರುವುದು ವಿಪರ್ಯಾಸವೋ ಅಥವಾ ನಿರ್ಲಕ್ಷ್ಯವೋ ತಿಳಿಯದಂತಾಗಿದೆ. ಏನೇ ಕೇಳಿದರು ಪಂಚಾಯತಿ ದಿವಾಳಿಯಾಗಿದೆ, ಹಳಬರು ಮತ್ತು ಹಿರಿಯ ಅಧಿಕಾರಿಗಳು ನಮಗೆ ಕೆಲಸ ಮಾಡಲು ಏನು ಉಳಿಸಿಲ್ಲ ಎಂಬ ಸಾಬೂಬನ್ನು ಹಾಲಿ ಇರುವ ಪಿ.ಡಿ.ಓ ಗಳು ನೀಡುತ್ತಿದ್ದಾರೆ.
ಆದ್ದರಿಂದ ನಂಜನಗೂಡು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಆದಷ್ಟು ಬೇಗ ಈ ಬಗ್ಗೆ ಗಮನ ಹರಿಸಿ ಮೋರಿಯನ್ನು ಸ್ವಚ್ಛಗೊಳಿಸಲು ಮುಂದಾಗಬೇಕು ಹಾಗೂ ತೆರೆದ ಮೋರಿಯನ್ನು ಮುಚ್ಚಲು ಕ್ರಮವಹಿಸಬೇಕು ಎಂಬುದು ಸ್ಥಳಿಯ ಸಾರ್ವಜನಿಕರ ಮನವಿಯಾಗಿದೆ.