ಮನೆ ರಾಜ್ಯ ಸುಗ್ರೀವಾಜ್ಞೆಯಿಂದ ಉದ್ಯೋಗ ಸೃಷ್ಟಿಯಾಗುವುದೇ?: ಡಿ.ಕೆ.ಶಿಕುಮಾರ್‌

ಸುಗ್ರೀವಾಜ್ಞೆಯಿಂದ ಉದ್ಯೋಗ ಸೃಷ್ಟಿಯಾಗುವುದೇ?: ಡಿ.ಕೆ.ಶಿಕುಮಾರ್‌

0

ಬೆಂಗಳೂರು (Bengaluru)- ರಾಜ್ಯ ಸರ್ಕಾರ ಜಾರಿಗೊಳಿಸಿರುವ ಸುಗ್ರೀವಾಜ್ಞೆಯಿಂದ ಉದ್ಯೋಗ ಸೃಷ್ಟಿಯಾಗುವುದೇ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (D.K.Shivakumar) ಪ್ರಶ್ನಿಸಿದ್ದಾರೆ.

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆಯನ್ನು ತರಾತುರಿಯಲ್ಲಿ ಜಾರಿಗೊಳಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಚರ್ಚಿಸದೇ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಮಸೂದೆಯನ್ನು ಕಾಯ್ದೆಯ ರೂಪದಲ್ಲಿ ಜಾರಿಗೆ ತರುವ ಜರೂರತ್ತು ಏನಿತ್ತು? ಇದು ಉದ್ಯೋಗಗಳನ್ನು ಸೃಷ್ಟಿಸುತ್ತದೆಯೇ? ಆಕ್ಸಿಜನ್‌ ಸಿಗದೆ ಕೋವಿಡ್‌ ಸಮಯದಲ್ಲಿ ಸತ್ತವರಿಗೆ ಮರುಜೀವ ನೀಡುವುದೇ? ಅಥವಾ ಇದು ಸುಳ್ಳು ಆರೋಪಗಳ ಮೇಲೆ ಅಲ್ಪಸಂಖ್ಯಾತರಿಗೆ ತೊಂದರೆ ಕೊಡುವ ತಂತ್ರವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಆಯೋಗದ ಅಧಿಕಾರ ಮೊಟಕು: ‘ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಆದರೆ, ರಾಜ್ಯ ಸರ್ಕಾರ ಚುನಾವಣಾ ಆಯೋಗದ ಅಧಿಕಾರವನ್ನೇ ಮೊಟಕುಗೊಳಿಸಿ, ಚುನಾವಣೆ ನಡೆಸದಂತೆ ತಡೆಯುತ್ತಿದೆ’ ಎಂದು ಶಿವಕುಮಾರ್‌ ಪ್ರತ್ಯೇಕ ಟ್ವೀಟ್‌ನಲ್ಲಿ ದೂರಿದ್ದಾರೆ.

ತನ್ನ ಅಧಿಕಾರವನ್ನು ರಾಜ್ಯ ಸರ್ಕಾರ ಕಸಿದುಕೊಂಡಿದೆ ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ಸಲ್ಲಿಸಿರುವ ಮೆಮೊದಲ್ಲಿ ತಿಳಿಸಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಇನ್ನೂ ಜೀವಂತವಾಗಿದೆ ಎಂದು ಹೇಳಬಹುದಾ ಎಂದು ಕೇಳಿದ್ದಾರೆ.