ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಉಚಿತ ಭರವಸೆ ನೀಡುತ್ತಿದೆ. ಅವರ ಭರವಸೆ ಈಡೇರಿಕೆ ಅಸಾಧ್ಯವಾಗಿದ್ದು, ಕಾಂಗ್ರೆಸ್ ನ ಭರವಸೆ ನಂಬಬೇಡಿ ಎಂದು ರಾಜ್ಯದ ಜನತೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮನವಿ ಮಾಡಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಲ್ಕು ಉಚಿತ ಭರವಸೆ ನೀಡಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಉಚಿತ ಕೊಡುಗೆ ನೀಡೋದಾಗಿ ಹೇಳಿ ಕೈಕೊಟ್ಟಿದೆ. ಮಧ್ಯಪ್ರದೇಶದಲ್ಲಿ ಸಾಕಷ್ಟು ಭರವಸೆ ನೀಡಿತ್ತು.. ಸಾಲಮನ್ನಾ ಘೋಷಣೆ ಮಾಡಿತ್ತು.. ಈಗ ಮತ್ತೆ ಚುನಾವಣೆ ಬರುತ್ತಿದೆ. ಆದರೆ ಮಧ್ಯಪ್ರವೇಶ ಭರವಸೆ ಭರವಸೆಗಳಾಗಿಯೇ ಉಳಿದಿವೆ ಎಂದರು.
ಅದಾನಿ ವಿಚಾರದಲ್ಲಿ ಕಾಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ನಿರಾಧಾರವಾಗಿದೆ. ಅದಾನಿ ವಿಚಾರದಲ್ಲಿ ಸತ್ಯಕ್ಕೆ ದೂರವಾದ ಆರೋಪ ಮಾಡಲಾಗುತ್ತಿದೆ. ಮೋದಿ ಅದಾನಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಅಂದರೆ ರಾಜಸ್ಥಾನದ ಇಡೀ ಸೋಲಾರ್ ಪ್ರಾಜೆಕ್ಟ್ ಅದಾನಿ ಕಂಪನಿಗೆ ಕೊಡಲಾಗಿದೆ. ಅಲ್ಲಿ ಯಾರ ಸರ್ಕಾರ ಇದೆ? ಮೋದಿ ಅದಾನಿ ಭಾಯ್ ಭಾಯ್ ಅನ್ನುವವರು ರಾಜಸ್ಥಾನದಲ್ಲಿ ಯಾಕೆ ಟೆಂಡರ್ ರದ್ದು ಮಾಡಲಿಲ್ಲ. ಛತ್ತೀಸ್ ಗಡದಲ್ಲಿ ಯಾಕಿಲ್ಲ, ಆರೋಪ ಮಾಡುವ ನೀವು ರಾಜಸ್ಥಾನದಲ್ಲಿ ಅದಾನಿ ಕಂಪನಿಗೆ ಕೊಟ್ಟಿರುವ ಟೆಂಡರ್ ರದ್ದು ಮಾಡಿ ಎಂದು ಸವಾಲು ಹಾಕಿದರು.
ರಾಜ್ಯಕ್ಕೆ ಜಿಎಸ್ ಟಿ ಪಾಲು ಬಾಕಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ರಾಜ್ಯಕ್ಕೆ ಯಾವುದೇ ಜಿಎಸ್ ಟಿ ಬಾಕಿ ಇಲ್ಲ. ನಮ್ಮ ಮುಂದೆ ಕರ್ನಾಟಕದ ಜಿಎಸ್ ಟಿ ಬಾಕಿ ಪ್ರಸ್ತಾಪ ಯಾವುದೂ ಇಲ್ಲ. ಎಲ್ಲ ಬಾಕಿ ಕೊಡಲಾಗಿದೆ ಎಂದರು.