ಮನೆ ರಾಜ್ಯ ಖಾಸಗಿ ಆಸ್ಪತ್ರೆಗಳ ವಂಚನೆಗಳಿಗೆ ಬಲಿಯಾಗಬೇಡಿ, ಸರಕಾರಿ ಆಸ್ಪತ್ರೆಗಳಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಿ: ಡಾ.ಜಾವೇದ್ ಪಾಶಾ

ಖಾಸಗಿ ಆಸ್ಪತ್ರೆಗಳ ವಂಚನೆಗಳಿಗೆ ಬಲಿಯಾಗಬೇಡಿ, ಸರಕಾರಿ ಆಸ್ಪತ್ರೆಗಳಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಿ: ಡಾ.ಜಾವೇದ್ ಪಾಶಾ

0

ಮೈಸೂರು: ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಮೈಸೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು ವತಿಯಿಂದ “ಮಹಿಳೆಯರಿಗೆ ಆರೋಗ್ಯ ಅರಿವು ಕರ‍್ಯಕ್ರಮ (ಪೌಷ್ಟಿಕ ಆಹಾರ ಮತ್ತು ವಿಶ್ವ ಸ್ತನ್ಯಪಾನ ಸಪ್ತಾಹ)” ಕರ‍್ಯಕ್ರಮವನ್ನು ನಗರದ ಶಾಂತಿನಗರದ ಮೇವ ಎಜುಕೇಶನ್ ಟ್ರಸ್ಟ್ ನಲ್ಲಿ ನಡೆಸಲಾಯಿತು.

Join Our Whatsapp Group

ಕಾರ್ಯಕ್ರಮದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ನಿರ್ದಶಕರಾದ ಸರಸ್ವತಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ಸಂಸ್ಥೆ ಮತ್ತು ಸಂಸ್ಥೆಯ ಕಾರ್ಯಕ್ರಮಗಳನ್ನು ವಿವರಿಸಿದರು.

ವಿಶ್ವದಾದ್ಯಂತ ಆಗಸ್ಟ್ 1ರಿಂದ 7ವರೆಗೆ ವಿಶ್ವ ಸ್ಥನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು  ನಡೆಸಲಾಗುತ್ತದೆ. ಶಿಶುಮರಣ ತಡೆಗಟ್ಟಲು ಹಾಗೂ ಎದೆ ಹಾಲಿನ ಮಹತ್ವ ತಿಳಿಸುವುದು ಈ ಸಪ್ತಾಹದ ಉದ್ದೇಶವಾಗಿದೆ. ಹುಟ್ಟಿದ ಮಗುವಿಗೆ ಸ್ತನ್ಯಪಾನ ಮಾಡಿಸುವುದರಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಎದೆ ಹಾಲು ಅಮೃತಕ್ಕೆ ಸಮಾನ. ಎದೆ ಹಾಲನ್ನು ಕುಡಿಸುವುದರಿಂದ ಸೌಂದರ್ಯ ಹಾಳಾಗುತ್ತದೆ ಎಂಬುದು ಕೆಲವು ಮಹಿಳೆಯರ ತಪ್ಪು ಕಲ್ಪನೆಯಾಗಿದೆ ಎಂದು ಹೇಳುತ್ತಾ ಮಹಿಳೆಯರು ಆರೋಗ್ಯವಾಗಿರಲು ಪೌಷ್ಟಿಕ ಆಹಾರ ಸೇವಿಸುವ ಮೂಲಕ ಹಲವು ರೋಗಗಳನ್ನು ತಮ್ಮ ಹಂತದಲ್ಲೆ ತಡೆಗಟ್ಟಬಹುದು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಂಗನವಾಡಿ ಮೇಲ್ವಿಚಾರಕಿ  ತಾರಾ, ಸ್ತನ್ಯಪಾನವು ಮಗುವಿಗೆ ದೇವರು ಕೊಟ್ಟ ವರವಾಗಿದ್ದು ಇದರಿಂದ ತಾಯಿ ಹಾಗೂ ಮಗುವಿನ ಆರೋಗ್ಯ ವೃದ್ಧಿಯಾಗುತ್ತದೆ ಮತ್ತು ತಮ್ಮ ಇಲಾಖಾ ವತಿಯಿಂದ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಇರುವ ವಿವಿಧ ಸೌಲಭ್ಯಗಳ ಕುರಿತು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಮಾಹಿತಿಗಾರರಾಗಿ ಆಗಮಿಸಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು  ಪದ್ಮಾವತಿ ಮಾತನಾಡುತ್ತಾ, ತಾಯಿ ಮಗುವಿಗೆ ಎದೆ ಹಾಲುಣಿಸುವುದರಿಂದ ಮಕ್ಕಳ ಸಾವಿನ ಪ್ರಮಾಣ ಕಡಿಮೆಯಾಗುತ್ತದೆ. ಮಗುವು ಶಕ್ತಿಯುತವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಮಗುವಿಗೆ ತಾಯಿಯ ಹಾಲು ಸೋಂಕು ನಿವಾರಕ ಪ್ರಥಮ ಲಸಿಕೆಯಾಗಿದ್ದು, ತಾಯಿ ಮತ್ತು ಮಗುವಿನ ಬಾಂಧವ್ಯವನ್ನು ಹೆಚ್ಚಿಸುವ ಪ್ರಕ್ರಿಯೆಯಾಗಿದೆ. ತಾಯಿ ಹಾಲು ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ ತಾಯಿಯ ಆರೋಗ್ಯವನ್ನೂ ಕಾಪಾಡುತ್ತದೆ ಎಂದರು. ತಾಯಿಯ ಹಾಲು ಮಗುವಿಗೆ ಸಂಜೀವಿನಿ ರೂಪದಲ್ಲಿ ರೋಗ ನಿರೋಧಕ ಅಂಶಗಳನ್ನು ಒಳಗೊಂಡಿರುತ್ತದೆ. ಉತ್ತಮವಾದ ಪೌಷ್ಟಿಕಾಂಶಗಳಿಂದ ಕೂಡಿರುತ್ತದೆ, ಇದರಿಂದ ಮಗುವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾದ ಬೆಳವಣಿಗೆಗೆ ಪೂರಕವಾಗಿರುತ್ತದೆ. ತಾಯಂದಿರು ತಮ್ಮ ಮಕ್ಕಳಿಗೆ ಕನಿಷ್ಠ 6 ತಿಂಗಳಾದರೂ ಹಾಲನ್ನು ಕುಡಿಸಬೇಕು ಎಂದರು.

ಜೀವನದ ಪ್ರತಿಯೊಂದು ಹಂತದಲ್ಲೂ ವ್ಯಕ್ತಿಗಳ ಪೌಷ್ಟಿಕಾಂಶದ ಬೇಡಿಕೆಗಳನ್ನು ಪೂರೈಸುವ ಆಹಾರಕ್ರಮವನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ. ಸಮತೋಲಿತ ಆಹಾರವನ್ನು ಸೇವಿಸಬೇಕಿದೆ ನಿಮ್ಮ ಆಹಾರದಲ್ಲಿ ಹೆಚ್ಚಿನ ಧಾನ್ಯಗಳು, ಕಾಳುಗಳು, ಹಣ್ಣುಗಳು, ತರಕಾರಿಗಳು, ಬೀಜಗಳನ್ನು ಸೇರಿಸಿ. ಜಂಕ್ ಫುಡ್ ಳಿಂದ ದೂರ ಉಳಿಯಿರಿ. ನಾವು ಸಮತೋಲನ ಆಹಾರ ಸೇವಿಸದಿದ್ದರೆ ಅಪೌಷ್ಠಿಕತೆ ಉಂಟಾಗುತ್ತದೆ. ಮನೆಯಲ್ಲಿರುವ ಆಹಾರ ಪದರ‍್ಥಗಳನ್ನು ಹೆಚ್ಚು ಹೆಚ್ಚು ಬಳಸಿರಿ ಎಂದು ತಿಳಿಸಿದರು.

ನಗರ ಆರೋಗ್ಯ ಕೇಂದ್ರ, ಶಾಂತಿನಗರ ಇದರ ಆಡಳಿತ ವೈಧ್ಯಾಧಿಕಾರಿಗಳಾದ ಡಾ.ಜಾವೇದ್ ಪಾಶಾ ಇವರು ಕಾರ್ಯಕ್ರಮವನ್ನು ಉದೇಶಿಸಿ ಮಾತನಾಡುತ್ತಾ, ಖಾಸಗಿ ಆಸ್ಪತ್ರಗಳ ವಂಚನೆಗಳಿಗೆ ಬಲಿಯಾಗಬೇಡಿ, ಸರಕಾರಿ ಆಸ್ಪತ್ರೆಗಳಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಿ, ಖಾಸಗಿ ಆಸ್ಪತ್ರಗಳಲ್ಲಿ ಸಿಗುವ ಸೌಲಭ್ಯಗಳಿಗಿಂತ ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯ ಮತ್ತು ಚಿಕಿತ್ಸೆ ಸಿಗುತ್ತದೆ ಆದರೆ ಜನರು ತಪ್ಪು ತಿಳುವಳಿಕೆಯಿಂದಾಗಿ ಖಾಸಗಿ ಆಸ್ಪತ್ರೆ ಕಡೆಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ, ಜನರು ಉಚಿತವಾಗಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಹೋಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಮತ್ತು ಕಂಪ್ಯೂಟರ್ ತರಬೇತಿ ಪಡೆದ ಯುವಜನರಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಮಾಣ ಪತ್ರವನ್ನು ಅತಿಥಿಗಳು ವಿತರಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮೇವ ಎಜುಕೇಶನ್ ಟ್ರಸ್ಟ್ ಇದರ ನಿರ್ದೇಶಕರಾದ ಸರ್ಫ್ ರಾಜ್ ರೇಹಮಾನ್, ಅಂಗನಾವಡಿ ಮೇಲ್ವಿಚಾರಕಿಯಾದ ಕಮಲಾಕ್ಷಿ, ನಿವೃತ್ತ ಕಾರ್ಮಿಕ ಆಧಿಕಾರಿಯಾದ ಮಹಮ್ಮದ್ ರಫಿಉಲ್ಲಾ,  ಆರೋಗ್ಯ ಕಾರ್ಯಕರ್ತೆ, ಸಂಸ್ಥೆಯ ಸಿಬ್ಬಂದಿ ವರ್ಗ ಮತ್ತು ಶಾಂತಿನಗರದ ಮಹಿಳೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸಂಸ್ಥೆಯ ಸಂಯೋಜಕರಾದ ನ್ಯಾನ್ಸಿ ಸ್ವಾಗತಿಸಿ, ಕು.ಜ್ಯೋತಿ ಧನ್ಯವಾದಗಳನ್ನು ಸಲ್ಲಿಸಿ, ವಿಕ್ಟೋರಿಯಾ ಕಾರ್ಯಕ್ರಮವನ್ನು ನಿರೂಪಿಸಿದರು.