ಮೈಸೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಐದು ಕೋಟಿ ಫಲಾನುಭವಿಗಳನ್ನು ಅವಮಾನಿಸಬೇಡಿ. ಗ್ಯಾರಂಟಿಗಳು ಕನ್ನಡ ನಾಡಿನ ಜನತೆಯ ಹಕ್ಕು ಎಂದು ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಆಯೋಜಿಸಿದ್ದ ಚಾರಿತ್ರಿಕ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಬೆಲೆ ಏರಿಕೆಯ ಬೆಂಕಿಯಲ್ಲಿ ಬಿದ್ದವರ ನೆರವಿಗಾಗಿ ಗ್ಯಾರಂಟಿ ಯೋಜನೆ ಘೋಷಿಸಿದ್ದೂ ಆಯ್ತು, ಜಾರಿ ಮಾಡಿದ್ದೂ ಆಯ್ತು ಎಂದು ನುಡಿದರು.
ನಮ್ಮ ಗ್ಯಾರಂಟಿಗಳು ಬಿಜೆಪಿಯವರ ಮನೆ ಬಾಗಿಲಿಗೂ ಮುಟ್ಟಿದೆ. ಬಿಜೆಪಿಯ ಮತದಾರರೂ ಕಾಂಗ್ರೆಸ್ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ. ಇವರನ್ನು ಅವಮಾನಿಸಬೇಡಿ. ನಮ್ಮ ಗ್ಯಾರಂಟಿಗಳು ನಾಡಿನ ಜನರ ಹಕ್ಕು ಎಂದು ಪುನರುಚ್ಛರಿಸಿ ಬಿಜೆಪಿ ನಾಯಕರಿಗೆ ತಿವಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯೇ ಆಗಲ್ಲ ಎಂದು ನರೇಂದ್ರ ಮೋದಿ, ಬೊಮ್ಮಾಯಿ, ಆರ್.ಅಶೋಕ್, ವಿಜಯೇಂದ್ರ ಎಲ್ಲರೂ ಸುಳ್ಳಿನ ಮೇಲೆ ಸುಳ್ಳು ಹೇಳಿದರು.
ನಾವು ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಆಗ ಹೊಸ ಸುಳ್ಳು ಹಬ್ಬಿಸಿದರು. ಗ್ಯಾರಂಟಿಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದರು. ಆದರೆ ನಾವು ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೊರತಾದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಮೀಸಲಿಟ್ಟೆವು. ಹೀಗಾಗಿ ಬಿಜೆಪಿಯ ಈ ಮಾತು ಕೂಡ ಸುಳ್ಳಾಯಿತು.
ಹೀಗೆ ಬಿಜೆಪಿಮಂದಿ ಮೊದಲಿಗೆ ನಮ್ಮ ಗ್ಯಾರಂಟಿಗಳನ್ನು ಆಡಿಕೊಂಡು, ಸುಳ್ಳು ಹೇಳಿದರು. ಆದರೆ ನಮ್ಮ ಗ್ಯಾರಂಟಿಗಳು ಯಶಸ್ವೀ ಜಾರಿ ಆದ ಬಳಿಕ ನಮ್ಮದೇ ಗ್ಯಾರಂಟಿ ಸ್ಕೀಂಗಳನ್ನು ಕದ್ದು ಅದಕ್ಕೆ ಮೋದಿ ಗ್ಯಾರಂಟಿ ಎಂದು ಹೆಸರಿಟ್ಟಿದ್ದಾರೆ ಎಂದು ಟೀಕಿಸಿದರು.
ನಾವು ನುಡಿದಂತೆ ನಡೆದಿದ್ದೇವೆ: ಬಿಜೆಪಿ ಸುಳ್ಳುಗಳನ್ನೇ ನುಡಿದಿದ್ದಾರೆ
ನಾವು ನುಡಿದಂತೆ ನಡೆದಿದ್ದೇವೆ: ಬಿಜೆಪಿ ಸುಳ್ಳುಗಳನ್ನೇ ನುಡಿದಿದ್ದಾರೆ. ತಾನು ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ಭಾರತೀಯರ ಖಾತೆಗೆ 15 ಲಕ್ಷ ರೂ ಹಾಕುವುದಾಗಿ ಮೋದಿ ಘೋಷಿಸಿದ್ದರು. 15 ಲಕ್ಷ ಇರಲಿ, 15 ಪೈಸೆನಾದ್ರೂ ಯಾರಿಗಾದರೂ ಹಾಕಿದರಾ? ಬಿಜೆಪಿಯವರಾಗಲಿ, ಮೋದಿಯವರಾಗಲೀ ಚುನಾವಣೆಯಲ್ಲಿ ಕೊಟ್ಟ ಭರವಸೆಗಳಲ್ಲಿ ಒಂದನ್ನಾದರೂ ಈಡೇರಿಸಿದ್ದಾರಾ ಎಂದು ಪ್ರಶ್ನಿಸಿ ಎಂದರು.
ಮೈಸೂರಿನ ಅಭಿವೃದ್ಧಿಗೆ-ಮೈಸೂರು ಜನತೆಯ ಪ್ರಗತಿಗೆ ಏನು ಮಾಡಿದ್ರಿ? ಬಿಜೆಪಿಗೆ ಸಿ.ಎಂ.ಪ್ರಶ್ನೆ
ಮೈಸೂರು ಜಿಲ್ಲೆಯ ಅಭಿವೃದ್ಧಿಗೆ- ಮೈಸೂರು ಜನರ ಪ್ರಗತಿಗೆ ಬಿಜೆಪಿ ಇವತ್ತಿನವರೆಗೂ ಒಂದೇ ಒಂದು ಕಾರ್ಯಕ್ರಮವನ್ನೂ ಮಾಡಲೇ ಇಲ್ಲ ಏಕೆ ಎಂದು ಸಿ.ಎಂ ಸಿದ್ದರಾಮಯ್ಯ ಆಕ್ರೋಶದಿಂದ ಪ್ರಶ್ನಿಸಿದರು.
ಆಸ್ಪತ್ರೆ, ಕಾಲೇಜು, ಮಾರುಕಟ್ಟೆ , ರಸ್ತೆ, ನೀರು ಸೇರಿ ಮೈಸೂರಿನ ಎಲ್ಲಾ ಪ್ರಗತಿ ಕಾರ್ಯಕ್ರಮಗಳಿಗೆ ನಮ್ಮ ಸರ್ಕಾರ ನಿರಂತರವಾಗಿ ಅನುದಾನ ನೀಡುತ್ತಲೇ ಬಂದಿದೆ. ಈ ಬಜೆಟ್ ನಲ್ಲೂ ಹಣ ಮೀಸಲಿಟ್ಟಿದ್ದೇವೆ ಎಂದು ವಿವರಿಸಿದರು.
ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಮಾಜಿ ಸಚಿವರಾದ ಶಾಸಕ ತನ್ವೀರ್ ಸೇಠ್, ಗ್ಯಾರಂಟಿ ಯೋಜನೆಗಳ ಜಾರಿ ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪ ಅಮರ್ ನಾಥ್ , ಆಶ್ರಯ ಸಮಿತಿ ಅಧ್ಯಕ್ಷರಾದ ಡಾ.ಯತೀಂದ್ರ ಉಪಸ್ಥಿತರಿದ್ದರು.
ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಅವರು ಅಧ್ಯಕ್ಷತೆ ವಹಿಸಿದ್ದ ಬೃಹತ್ ಸಮಾವೇಶದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಶಾಸಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.