ಮೈಸೂರು(Mysuru): ಸಿ.ಟಿ.ರವಿ ನಾನು. ಸ್ಯಾಂಟ್ರೊ ರವಿ ಯಾರೋ ಗೊತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿರುವವರ ಜೊತೆ ಯಾರ‍್ಯಾರೋ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಅವರೊಂದಿಗೆಲ್ಲ ಸಂಬಂಧ ಕಲ್ಪಿಸಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಐಎಂಎ ಪ್ರಕರಣದ ಆರೋಪಿಯು ಜೊತೆ ಎಚ್.ಡಿ.ಕುಮಾರಸ್ವಾಮಿ ಕೂಡ ಫೋಟೊ ತೆಗೆಸಿಕೊಂಡಿದ್ದ. ಹೀಗಾಗಿ ಎಚ್’ಡಿಕೆ ಅವರು ಕಿಂಗ್’ಪಿನ್ ನಂಬರ್ 2 ಎನ್ನಲು ಆಗುತ್ತದೆಯೇ? ಹೆಸರು ದುರುಪಯೋಗ ಮಾಡಿಕೊಳ್ಳುವವರು ಇದ್ದೇ ಇರುತ್ತಾರೆ ಎಂದರು.
ತಾಂತ್ರಿಕ ಹಾಗೂ ವ್ಯವಹಾರಿಕ ಸಹಕಾರಕ್ಕಾಗಿ ಅಮುಲ್– ನಂದಿನಿ ಒಂದಾಗಬಹುದೆಂದು ಅಮಿತ್ ಶಾ ಹೇಳಿದ್ದಾರೆ. ಆದರೆ, ವಿರೋಧಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುತ್ತಿವೆ. ಜಂಟಿ ಸಮರಾಭ್ಯಾಸ ನಡೆಸಿದ ಮಾತ್ರಕ್ಕೆ ಭಾರತ– ಅಮೆರಿಕ, ಭಾರತ– ರಷ್ಯಾ ಒಂದೇ ದೇಶ ಎಂದು ಹೇಳಲಾಗುತ್ತದೆಯೇ? ಅಮುಲ್– ನಂದಿನಿ ಸಂಸ್ಥೆಗಳು ಪರಸ್ಪರ ಸಹಕಾರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಬಲ್ಯ ಸಾಧಿಸಲಿವೆ ಎಂದು ತಿಳಿಸಿದರು.
ಹಳೆ ಮೈಸೂರು ಭಾಗದಲ್ಲಿ ಗೆಲ್ಲುವ ಪ್ರಯತ್ನ:
ಹಳೆ ಮೈಸೂರು ಭಾಗದ 59 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿಯು ಸ್ಪರ್ಧಿಸಿ ಗೆಲ್ಲುವ ಪ್ರಯತ್ನ ನಡೆಸಲಿದೆ. ನಮ್ಮದು ಸೈದ್ಧಾಂತಿಕ ಬದ್ಧತೆಯುಳ್ಳ ಪಕ್ಷವಾಗಿದ್ದು, ವಿಚಾರದ ಆಧಾರದಲ್ಲಿಯೇ ಪಕ್ಷವನ್ನು ಬೆಳೆಸಲು ನಿರಂತರ ಪ್ರಯತ್ನ ಮುಂದುವರಿಸಿದ್ದೇವೆ ಎಂದರು.