ಮನೆ ಸುದ್ದಿ ಜಾಲ ಮಕ್ಕಳನ್ನು ಗುದ್ದುವುದಲ್ಲ, ತಿದ್ದುವುದು: ನಾಗಣ್ಣಗೌಡ

ಮಕ್ಕಳನ್ನು ಗುದ್ದುವುದಲ್ಲ, ತಿದ್ದುವುದು: ನಾಗಣ್ಣಗೌಡ

0

ಮೈಸೂರು: ಮಕ್ಕಳನ್ನು ದಂಡಿಸುವುದಕ್ಕಿಂತ ಅವರಿಗೆ ಒಳ್ಳೆಯ ಸಂಸ್ಕಾರ ನೀಡಿ, ಅವರು ತಪ್ಪು ಮಾಡಿದಾಗ ತಿದ್ದುವುದರಿಂದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದು ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನಾಗಣ್ಣಗೌಡ ಅಭಿಪ್ರಾಯಪಟ್ಟರು.

ನಗರದ ವಾರ್ತಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಮಕ್ಕಳ ವಿರುದ್ದದ 96 ದೌರ್ಜನ್ಯ ಪ್ರಕರಣಗಳು ಈ ವರ್ಷ ದಾಖಲಾಗಿದ್ದು ಒಟ್ಟು 1400 ಪ್ರಕರಣಗಳು ವಿವಿಧ ಹಂತಗಳಲ್ಲಿದ್ದು ಆಯೋಗ ಸ್ವಯಂ ದೂರು ದಾಖಲಿಸಿಕೊಳ್ಳುವ ಮೂಲಕ ಮಕ್ಕಳಿಗೆ ನ್ಯಾಯ ಕೊಡಿಸಲು ಶ್ರಮಿಸುತ್ತದೆ ಎಂದರು.

ರಾಜ್ಯದಲ್ಲಿ ದಿನನಿತ್ಯ ವಿವಿಧ ಭಾಗಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಮಕ್ಕಳ ಮೇಲಿನ ನಡೆಯುತ್ತಿರುವ ದೌರ್ಜನ್ಯಗಳ ಮೂಲವನ್ನು ಕಂಡುಹಿಡಿದು ಸಂಬಂಧಿತ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೂಡಿ ಮಕ್ಕಳ ಅಭಿವೃದ್ಧಿ ಹಾಗೂ ಹಿತರಕ್ಷಣೆ ಕಾಯುವುದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಮದುಮಗ ಜೈಲಿಗೆ : ಹಿಂದುಳಿದ ಹಾಗು ಆದಿವಾಸಿ ಜನಾಂಗದವರು ಹೆಚ್ಚಾಗಿರುವ ಕಡೆ ಹೆಚ್ಚಾಗಿ ಬಾಲ್ಯ ವಿವಾಹಗಳು ನಡೆಯುತ್ತಿದು ಚಿಕ್ಕ ವಯಸ್ಸಿನ ಗಂಡು ಮಕ್ಕಳಿಗೆ ಮದುವೆ ಮಾಡುವುದರಿಂದ ಅವರುಗಳ ಮೇಲೆ ಪೊಲೀಸರು ಪೋಕ್ಸೋ ಮೊಕದ್ದೊಮೆ ದಾಖಲಿಸಿ ಜೈಲಿಗೆ ತಳ್ಳುತ್ತಾರೆ ಹಾಗಾಗಿ ಮದುವೆಯಾಗಿ ಮಾವನ ಮನೆಗೆ ಹೋಗಬೇಕಾದ ಮಧುಮಗ ಜೈಲಿಗೆ ಹೋಗುವಂತ ಪರಿಸ್ಥಿತಿ ಇದೆ ಎಂದರು.

ದೇವದಾಸಿ ಮಕ್ಕಳ ತಂದೆ ಹೆಸರು ದಾಖಲಾತಿಗೆ ಕೇಳುವಂತಿಲ್ಲ :

ದೇವದಾಸಿ ಮಹಿಳೆಯರಿಗೆ ಜನಿಸುವ ಮಕ್ಕಳ ಶಾಲಾ ದಾಖಲಾತಿಗಳಿಗೆ ಅವರ ತಂದೆಯ ಹೆಸರನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ ಹಾಗಾಗಿ ತಾಯಿಯ ಹೆಸರು ಸಾಕು ಎಂದರು.

ಮಕ್ಕಳ ಸಹಾಯವಾಣಿ 112: ಈಗಿರುವ ಮಕ್ಕಳ ಸಹಾಯವಾಣಿ 1098 ಇದ್ದು ಮಾರ್ಚ ನಂತರ 112 ಗೆ ಸೇರಿಸಲಾಗುತ್ತದೆ ಎಂದರು.

ಮಕ್ಕಳ ಕಲ್ಯಾಣ ಸಮಿತಿಗೆ 2500 ಅರ್ಜಿ: ರಾಜ್ಯಮಟ್ಟದ ಮಕ್ಕಳ ಕಲ್ಯಾಣ ಸಮಿತಿ ಈಗಾಗಲೇ ರಚನೆಯಾಗಿದ್ದು, ಜಿಲ್ಲಾಮಕ್ಕಳ ಕಲ್ಯಾಣ ಸಮಿತಿಗಳನ್ನು ಸದ್ಯದಲ್ಲೇ ರಚಿಸಲಾಗುವುದು ಜಿಲ್ಲೆಗಳಿಂದ ಒಟ್ಟು 2500 ಅರ್ಜಿಗಳು ಬಂದಿದ್ದು ಈ ಹಿಂದೆ ಅರ್ಜಿ ಸಲ್ಲಿಸಿರುವವರನ್ನೂ ಪರಿಗಣಿಸಲಾಗುವುದೆಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ಕರೆ ತರಲು ತ್ವರಿತ ಕ್ರಮಗಳನ್ನು ಕೈಗೊಳ್ಳವುದು, ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು, ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಈ ಬಗ್ಗೆ ಶಿಕ್ಷಕರು ಎಚ್ಚರಿಕೆ ನೀಡುವುದು ಹಾಗೂ ಷೋ ಪ್ರಕರಣಗಳು ವರದಿಯಾದಲ್ಲಿ ಸಂಬಂಧಿಸಿದವರ ವಿರುದ್ದ ಕೂಡಲೇ ಕ್ರಮ ವಹಿಸಬೇಕು. ಶಿಕ್ಷಕರಿಗೆ ಮಕ್ಕಳ ರಕ್ಷಣೆ ಕುರಿತು ಕಾರ್ಯಾಗಾರ/ಜಾಗೃತಿ ಕಾರ್ಯಕ್ರಮಗಳನ್ನು ನಡೆಸವುದು, ಎಲ್ಲಾ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ-1098 ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಕಡ್ಡಾಯವಾ ಅಳವಡಿಸಬೇಕು ಎಂದು ನಿರ್ದೆಶನವನ್ನು ನೀಡಲಾಗಿದೆ.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಬಾಲಕಿಯರ ವಸತಿ ನಿಲಯದಲ್ಲಿ ಕಡ್ಡಾಯವಾಗಿ ಮಹಿಳಾ ವಾರ್ಡ್ನ್‌ಗಳನ್ನು ನೇಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಸಿ.ಸಿ.ಟಿ.ವಿ ಅಳವಡಿಕೆ, ವಸತಿ ನಿಲಯಗಳ ನಿಲಯ ಪಾಲಕರು ಮಕ್ಕಳಿಗೆ ಸಲಹೆ ನೀಡವುದು, ಮಕ್ಕಳಿಗೆ ಸಂಸ್ಕಾರ ಮೂಡಿಸುವ ಕೆಲಸ ಮಾಡಬೇಕು ಹಾಗೂ ಸಂಬಂಧಿಸಿದ ಅಧಿಕಾರಿಗಳು ವಸತಿ ನಿಲಯಗಳಿಗೆ ಭೇಟಿ ನೀಡಿ, ಮಕ್ಕಳಿಗೆ ಆಪ್ತಸಮಾಲೋಚನೆ ಮತ್ತು ಮಕ್ಕಳೊಂದಿಗೆ ಸಂವಾದ ನಡೆಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಲಾಗಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಮೆಡಿಕಲ್ ಸ್ಟೋರ್‌’ಗಳಲ್ಲಿ ವಯಸ್ಕರು ಬಳಸುವ ವಸ್ತುಗಳನ್ನು ಮಕ್ಕಳಿಗೆ ನೀಡದಂತೆ ಸುತ್ತೋಲೆಯನ್ನು ಹೊರಡಿಸುವುದು, 18 ವರ್ಷದೊಳಗಿನ ಗರ್ಭಿಣಿಯರು ಕಂಡು ಬಂದಲ್ಲಿ ಕೂಡಲೇ ಸಂಬಂಧಿಸಿದ ಇಲಾಖೆಗೆ ದೂರು ನೀಡುವುದು ಹಾಗೂ ಅಪ್ರಾಪ್ತ ವಯಸ್ಸಿನ ಮಕ್ಕಳ ಆತ್ಮಹತ್ಯೆ ತಡೆಗಟ್ಟುವ ಕುರಿತು ಜಿಲ್ಲಾ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಲಾಗಿದೆ.

ಕಾರ್ಮಿಕ ಇಲಾಖೆಯು ಕಾರ್ಮಿಕರಿಗೆ ಸಂಬಂಧಿಸಿದಂತೆ ಬಾಲಕಾರ್ಮಿಕ ಮಕ್ಕಳ ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ಮಾಡಬೇಕು, ತಾಲ್ಲೂಕುವಾರು ಪಟ್ಟಿಯನ್ನು ಸಿದ್ಧಪಡಿಸಬೇಕು ಬಾಲ ಕಾರ್ಮಿಕರಿಗೆ ರೂ. 20,000/-ಗಳ ಪರಿಹಾರವನ್ನು ನೀಡುವ ಕುರಿತು ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಬೇಕು ಎಂದು ಅದೇಶಿಸಲಾಗಿದೆ.

ಕಂದಾಯ ಇಲಾಖೆಯು ತಾಲ್ಲೂಕು ಮಟ್ಟದ ಬಾಲ್ಯವಿವಾಹ ತಡೆ ಸಮಿತಿಯು ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ, ಬಾಲ್ಯವಿವಾಹದಲ್ಲಿ ತೊಡಗಿಕೊಂಡ ಪೂಜಾರಿ, ಪೋಷಕರು ಮತ್ತು ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೋಳಲಾಗುವುದು.

ಪೊಲೀಸ್ ಇಲಾಖೆಯು ಪೋಕ್ಸೋ ಪ್ರಕರಣಗಳ ಪ್ರಥಮ ವರ್ತಮಾನ ವರದಿಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ್ಕೆ ಸಲ್ಲಿಸಬೇಕು ಹಾಗೂ ಮಕ್ಕಳ ಸ್ನೇಹಿ ಪೊಲೀಸ್ ಠಾಣೆಯನ್ನಾಗಿ ಪರಿವರ್ತಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು, ವಿಶೇಷ ಮಕ್ಕಳ ಪೊಲೀಸ್ ಘಟಕಗಳ ಸಿಬ್ಬಂದಿಗಳಿಗೆ ಪೋ-2012, ಬಾಲ ನ್ಯಾಯ ಕಾಯ್ದೆ-2015 ಮತ್ತು ಮಕ್ಕಳ ಹಕ್ಕುಗಳ ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ತರಬೇತಿ ಕಾರ್ಯಾಗಾರಗಳನ್ನು ನಡೆಸಿ ಕಾಣೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅದೇಶಿಲಾಗಿದೆ ಎಂದು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಮಕ್ಕಳ ಗ್ರಾಮ ಸಭೆಗಳನ್ನು ನಡೆಯುತ್ತಿರುವ ಕುರಿತು ನಿರಂತರ ಮೇಲ್ವಿಚಾರಣೆ, ಅನುಷ್ಠಾನದ ಕುರಿತು ಆಯೋಗಕ್ಕೆ ವರದಿಯನ್ನು ಸಲ್ಲಿಸುವುದು, ಗ್ರಾಮ ಮಟ್ಟದಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡುವುದು. ಗುಣಮಟ್ಟದ ಪೌಷ್ಠಿಕ ಆಹಾರವನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ತಾಲ್ಲೂಕು ಮಟ್ಟದ ಬಾಲ್ಯವಿವಾಹ ತಡೆ ಸಮಿತಿಯು ನಡೆಯುವಂತೆ ಅಗತ್ಯ ಸಂಯೋಜನೆ ನಡೆಸಬೇಕು ಎಂದು ತಿಳಿಸಲಾಗಿದೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಬಾಲಮಂದಿರದ ಮಕ್ಕಳಿಗೆ ಆಹಾರ ಸರಿಯಾಗಿ ಸರಬರಾಜುವಾಗುತ್ತಿರುವ ಕುರಿತು ಕೂಲಂಕುಶವಾಗಿ ಪರಿಶೀಲನೆ ನಡೆಸವುದು, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಕಾಯ್ದೆಗಳ ಕುರಿತು ಭಾಗೀದಾರರಿಗೆ ತರಬೇತಿ ಮತ್ತು ಕಾರ್ಯಾಗಾರಗಳನ್ನು ನಡೆಸಬೇಕು ಎಂದು ತಿಳಿಸಲಾಗಿದೆ.

ಇನ್ನುಳಿದಂತೆ ಆಯುಷ್ ಇಲಾಖೆ, ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳು, ಕೃಷಿ ಇಲಾಖೆ, ಗಿರಿಜನ ಅಭಿವೃದ್ಧಿ ಸಮನ್ವಯ ಇಲಾಖೆ, ಬಾಲಕರ ಮತ್ತು ಬಾಲಕಿಯರ ಬಾಲಮಂದಿರಗಳಿಗೆ ಮಕ್ಕಳ ರಕ್ಷಣಾ ಸಂಬಂಧಿತ ವಿವಿಧ ರೀತಿಯ ಸೂಚನೆಗಳನ್ನು ನೀಡಿ ಆದೇಶವನ್ನು ಹೊರಡಿಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಅಶೋಕ್ ಕುಮಾರ್ ಡಿ ಹಾಗೂ ಪತ್ರಕರ್ತರು ಪಾಲ್ಗೊಂಡಿದ್ದರು.