ಮನೆ ಸುದ್ದಿ ಜಾಲ ಕಣ್ಣೀರು ಸುರಿಸಬೇಡ ನಿನ್ನ ಹಿಂದೆ ನಾನಿದ್ದೇನೆ – ರಿಷಬ್‌ಗೆ ಪಂಜುರ್ಲಿ ಅಭಯ

ಕಣ್ಣೀರು ಸುರಿಸಬೇಡ ನಿನ್ನ ಹಿಂದೆ ನಾನಿದ್ದೇನೆ – ರಿಷಬ್‌ಗೆ ಪಂಜುರ್ಲಿ ಅಭಯ

0

ಮಂಗಳೂರು : ಕಣ್ಣೀರು ಸುರಿಸಬೇಡ ನಿನ್ನ ಹಿಂದೆ ನಾನಿದ್ದೇನೆ ಎಂದು ಪಂಜುರ್ಲಿ ದೈವ ರಿಷಬ್‌ ಶೆಟ್ಟಿಗೆ ಅಭಯ ನೀಡಿದೆ. ಕಾಂತಾರ ಚಾಪ್ಟರ್‌ 1 ಸಿನಿಮಾ ಭರ್ಜರಿ ಯಶಸ್ವಿಯಾದ ಬೆನ್ನಲ್ಲೇ ಮಂಗಳೂರಿನ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮ ನಡೆಯಿತು.

ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ವತಿಯಿಂದ ಹರಕೆ ನೇಮೋತ್ಸವ ಆಯೋಜನೆಗೊಂಡಿತ್ತು. ರಿಷಬ್ ಶೆಟ್ಟಿ ಅವರನ್ನು ಅಪ್ಪಿ ಅಲಂಗಿಸಿದ ಮಡಿಲಲ್ಲಿ ಮಲಗಿದ ಪಂಜುರ್ಲಿ ದೈವ ನಿನ್ನ ಹಿಂದೆ ನಾನಿದ್ದೇನೆ ಎಂದು ಕೈ ಭಾಷೆಯಲ್ಲಿ ಸನ್ನೆ ಮಾಡುವ ಮೂಲಕ ಅಭಯ ನೀಡಿತು. ವೀಳ್ಯ ಶಕುನದ ಮೂಲಕ ನಾನು ಸಂತುಷ್ಟನಾಗಿದ್ದೇನೆ ಎಂದು ಹೇಳಿತು.

ಕೋಲಕ್ಕೂ ಮುನ್ನ ವಾರಾಹಿ ಪಂಜುರ್ಲಿಗೆ ಎಣ್ಣೆ ಬೂಳ್ಯ, ಎಣ್ಣೆ ಬೂಳ್ಯ ಅಂದ್ರೆ ತುಳುನಾಡಿನ ಸಾಂಪ್ರದಾಯಿಕ ಪೂಜೆ, ಶುಭ ಕಾರ್ಯಗಳಲ್ಲಿ ಬಳಸುವ ಒಂದು ವಿಧಿವಿಧಾನ, ಇದರಲ್ಲಿ ತೆಂಗಿನ ಎಣ್ಣೆ, ಐದು ಅಡಿಕೆ, ಮತ್ತು ಒಂದು ವೀಳ್ಯದೆಲೆ ಸೇರಿರುತ್ತದೆ. ಇದು ಪೂಜೆಗೆ ಮತ್ತು ಭೂತ ಕೋಲಕ್ಕೆ ಅನುಮತಿ ನೀಡುವ ಸಂಕೇತ ನೀಡಲಾಯಿತು. ಎಣ್ಣೆ ಬೂಳ್ಯದಲ್ಲಿ ರಿಷಬ್ ಹಾಗೂ ಹೊಂಬಾಳೆ ನಿರ್ಮಾಪಕ ವಿಜಯ್ ಕಿರಗಂದೂರಿಗೆ ದೈವ ಅಭಯ ನೀಡಿತು.

ಮಧ್ಯರಾತ್ರಿವರೆಗೂ ಕೋಲ ಸೇವೆಯಲ್ಲಿ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ ರಾಮ್, ರಿಷಭ್‌ ಪತ್ನಿ ಪ್ರಗತಿ ಶೆಟ್ಟಿ ಸೇರಿದಂತೆ ಚಿತ್ರರಂಗದ ಹಲವು ಭಾಗಿಯಾಗಿದ್ದರು. ಗಗ್ಗರ ಸೇವೆ ಜೊತೆಗೆ ಅನ್ನಸಂತರ್ಪಣೆ ಕಾರ್ಯದಲ್ಲಿ ಕಾಂತಾರ ಚಿತ್ರತಂಡ ಭಾಗಿಯಾಗಿತ್ತು.

ಕಾಂತಾರ ಸಿನಿಮಾ ಬಿಡುಗಡೆಗೂ ಮೊದಲು ಈ ಏಪ್ರಿಲ್‌ನಲ್ಲಿ ರಿಷಬ್‌ ಶೆಟ್ಟಿ ಕುಟುಂಬ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ಭಾಗಿಯಾಗಿದ್ದರು. ಮಗನ ಹುಟ್ಟುಹಬ್ಬದ ದಿನ ದೈವಸ್ಥಾನಕ್ಕೆ ಆಗಮಿಸಿ ಚಿತ್ರಕ್ಕೆ ಯಾವುದೇ ಸಮಸ್ಯೆಯಾಗಬಾರದು ಎಂದು ಪ್ರಾರ್ಥನೆ ಮಾಡಿತ್ತು. ಈ ವೇಳೆ ಸಿನಿಮಾ ಮತ್ತು ಸಂಸಾರದಲ್ಲಿ ಜಾಗರೂಕತೆಯಿಂದ ಇರುವಂತೆ ದೈವ ಎಚ್ಚರಿಕೆ ನೀಡಿತ್ತು. ಸಿನಿಮಾ ಕ್ಷೇತ್ರ ಅಂದಾಗ ಅಲ್ಲಿ ವಿರೋಧಿಗಳು ಇರುತ್ತಾರೆ.

ಈ ವಿಚಾರದಲ್ಲಿ ಎಚ್ಚರಿಕೆ ಇರಲಿ ಎಂದು ಸೂಚಿಸಿತ್ತು. ಇದರ ಜೊತೆ ಹರಕೆ ಹೇಳಿಕೊಂಡಿದ್ದರೆ ಅದನ್ನು ಕೊಟ್ಟು ಬಿಡು ಎಂದು ರಿಷಬ್‌ಗೆ ದೈವ ಹೇಳಿತ್ತು. ಕಾಂತಾರ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಅದೇ ದೈವಸ್ಥಾನದಲ್ಲಿ ರಿಷಬ್ ಈಗ ಹರಕೆ ತೀರಿಸಿದ್ದಾರೆ. ಕಾಂತಾರ ಮೊದಲ ಸಿನಿಮಾ ಬಿಡುಗಡೆಯಾದ ಬಳಿಕವೂ ಚಿತ್ರತಂಡ ಹರಕೆಯ ಕೋಲವನ್ನು ತೀರಿಸಿತ್ತು. ಈಗ ಎರಡನೇ ಸಿನಿಮಾ ಯಶಸ್ವಿಯಾದ ನಂತರ ಮತ್ತೊಮ್ಮೆ ಹರಕೆಯನ್ನು ತೀರಿಸಿದೆ.