ಮನೆ ರಾಜ್ಯ ಮನೆ ಬಾಗಿಲಿಗೇ ಆರೋಗ್ಯ ಸೇವೆ : ರಾಜ್ಯಾದ್ಯಂತ ‘ಗೃಹ ಆರೋಗ್ಯ ಯೋಜನೆ’ ವಿಸ್ತರಣೆ : ದಿನೇಶ್...

ಮನೆ ಬಾಗಿಲಿಗೇ ಆರೋಗ್ಯ ಸೇವೆ : ರಾಜ್ಯಾದ್ಯಂತ ‘ಗೃಹ ಆರೋಗ್ಯ ಯೋಜನೆ’ ವಿಸ್ತರಣೆ : ದಿನೇಶ್ ಗುಂಡೂರಾವ್

0

ಬೆಂಗಳೂರು: ರಾಜ್ಯ ಸರ್ಕಾರದಿಂದ ಇನ್ನೊಂದು ಜನಪರ ಹೆಜ್ಜೆ – ಮನೆ ಬಾಗಿಲಿಗೇ ಆರೋಗ್ಯ ಸೇವೆ ಲಭ್ಯವಿರುವ ‘ಗೃಹ ಆರೋಗ್ಯ ಯೋಜನೆ’ಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಈ ಯೋಜನೆಯ ಮೂಲಕ 30 ವರ್ಷ ಮೇಲ್ಪಟ್ಟ ನಾಗರಿಕರಿಗೆ ಸಾಂಕ್ರಾಮಿಕವಲ್ಲದ ಪ್ರಮುಖ ರೋಗಗಳ ತಪಾಸಣೆ, ಉಚಿತ ಔಷಧ ವಿತರಣೆ ಹಾಗೂ ಅಗತ್ಯವಿದ್ದರೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ರೆಫರ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿದ ‘ಗೃಹ ಆರೋಗ್ಯ ಯೋಜನೆ’ ಉತ್ತಮ ಸ್ಪಂದನೆ ಪಡೆದ ಹಿನ್ನೆಲೆಯಲ್ಲಿ ಈಗ ಇಡೀ ರಾಜ್ಯಕ್ಕೆ ವಿಸ್ತರಿಸಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಯೋಜನೆಯ ವಿವರಗಳನ್ನು ಹಂಚಿಕೊಳ್ಳುತ್ತಾ ಈ ಯೋಜನೆಯು ಗ್ರಾಮೀಣ ಮತ್ತು ಪಟ್ಟಣ ಎರಡೂ ಮಟ್ಟದ ಜನರಿಗೆ ಉಚಿತ ಆರೋಗ್ಯ ತಪಾಸಣೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.

ಯೋಜನೆಯ ಅಡಿಯಲ್ಲಿ ಆರೋಗ್ಯ ಇಲಾಖೆ, ಸಮುದಾಯ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತರು ಹಾಗೂ ಸ್ಥಳೀಯ ಸ್ವಯಂಸೇವಕರ ಸಹಕಾರದಿಂದ ಜನರ ಮನೆಗಳಿಗೆ ಭೇಟಿ ನೀಡಲಾಗುತ್ತದೆ. ಮಂಗಳವಾರದಿಂದ ಶನಿವಾರದವರೆಗೆ ನಡೆಯುವ ಈ ಸೇವೆಯಲ್ಲಿ ಮಧುಮೇಹ, ರಕ್ತದೊತ್ತಡ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಮತ್ತು ಮಾನಸಿಕ ಆರೋಗ್ಯ ಸೇರಿದಂತೆ 14 ಪ್ರಮುಖ ಅಸಾಂಕ್ರಾಮಿಕ ರೋಗಗಳ ತಪಾಸಣೆ ನಡೆಯಲಿದೆ.

ಈ ಯೋಜನೆಯ ಮತ್ತೊಂದು ಮಹತ್ವದ ಅಂಶವೆಂದರೆ ಆಯುಷ್ ಪದ್ಧತಿಯ ಪ್ರೋತ್ಸಾಹ. ಆರೋಗ್ಯಕರ ಜೀವನಶೈಲಿಗೆ ಪ್ರೋತ್ಸಾಹ ನೀಡುವ ಆಯುಷ್ ಚಿಕಿತ್ಸೆ, ಆಹಾರ ಹಾಗೂ ಯೋಗದ ಮೂಲಕ ಆರೋಗ್ಯ ಕಾಪಾಡುವ ಬಗ್ಗೆ ಮಾರ್ಗದರ್ಶನ ಒದಗಿಸಲಾಗುತ್ತದೆ. ಜೊತೆಗೆ ನಿದ್ರೆ ದೋಷ, ಬಿಎಂಐ ಅಸಮತೋಲನ, ಧೂಮಪಾನ ಮತ್ತು ಮದ್ಯಪಾನ, ವ್ಯಸನ ಮುಕ್ತದ ಬಗ್ಗೆ ಆರೋಗ್ಯ ಶಿಕ್ಷಣ ಮತ್ತು ಆಪ್ತ ಸಮಾಲೋಚನೆಯ ಮುಖಾಂತರ ನಿಯಂತ್ರಣಕ್ಕೆ ಕ್ರಮ ನೀಡಲಾಗುವುದು.

ಈ ಯೋಜನೆಯ ಪ್ರಾಥಮಿಕ ಉದ್ದೇಶ, ಅಸಾಂಕ್ರಾಮಿಕ ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಉಚಿತ ಔಷಧ ಮತ್ತು ತಪಾಸಣೆ ಮೂಲಕ ರೋಗವನ್ನು ನಿಯಂತ್ರಿಸಿ, ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು. ತ್ವರಿತ ಚಿಕಿತ್ಸೆ ನೀಡುವ ಮೂಲಕ ಅಕಾಲಿಕ ಮರಣವನ್ನು ತಡೆಯುವುದು ಈ ನಿಟ್ಟಿನ ಪ್ರಮುಖ ಹೆಜ್ಜೆ.