ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಮರಗೂರ ಬಳಿ ಹವಾಮಾನ ಮಾಹಿತಿ ಸಂಗ್ರಹಕ್ಕೆ ಹಾರಿಸಿರುವ ಪ್ಯಾರಾಚ್ಯೂಟ್ ಮಾದರಿ ಬಾಹ್ಯಾಕಾಶ ಸಾಧನ ನೆಲಕ್ಕೆ ಅಪ್ಪಳಿಸಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಸ್ಥಾನಿಕ ಹವಾಮಾನ ಅಧ್ಯಯನಕ್ಕಾಗಿ ಮಾಹಿತಿ ಸಂಗ್ರಹಿಸಲು ಬೆಂಗಳೂರಿನ ಇಸ್ರೋ ಕೇಂದ್ರದಿಂದ ಕೆಲ ದಿನಗಳ ಹಿಂದೆ ವಿಶೇಷ ಸಾಧನವನ್ನು ಹಾರಿ ಬಿಡಲಾಗಿದೆ. ಸದರಿ ಸಾಧನ ಸ್ಥಾನಿಕ ಹವಾಮಾನ ಮಾಹಿತಿಯನ್ನು ಇಸ್ರೋ ಕೇಂದ್ರಕ್ಕೆ ರವಾನಿಸಲಿದೆ.
ಹೈದರಾಬಾದ್ ಇಸ್ರೋ ನಿರ್ವಹಣಾ ಕೇಂದ್ರದಿಂದ ಈ ಸಾಧನವನ್ನು ನಿಯಂತ್ರಣ ಮಾಡಲಾಗುತ್ತಿತ್ತು. ಲೋ ಲ್ಯಾಟಿಟ್ಯೂಡ್ ವೆದರ್ ಮಾನಿಟರಿಂಗ್ ಮಾಡಲು ಹಾರಿ ಬಿಡಲಾಗಿರುವ ಈ ಸಾಧನ ಮರಗೂರ ಬಳಿ ಜಮೀನಿನಲ್ಲಿ ಬಿದ್ದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಇಸ್ರೋ ಬಾಹ್ಯಾಕಾಶ ಸಾಧನ ಪತನದಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಬಾಹ್ಯಾಕಾಶ ಸಾಧನ ಪತನದಿಂದ ಆಗಿರುವ ನಷ್ಟ, ವ್ಯತಿರಿಕ್ತ ಪರಿಣಾಮಗಳ ಕುರಿತು ತಜ್ಞರ ಭೇಟಿ ಬಳಿಕವೇ ಮಾಹಿತಿ ಲಭ್ಯವಾಗಲಿದೆ.
ಸುದ್ದಿ ತಿಳಿಯುತ್ತಲೇ ಹೈದರಾಬಾದ್, ಬೆಂಗಳೂರು ಇಸ್ರೋ ಕೇಂದ್ರದಿಂದ ಹಿರಿಯ ವಿಜ್ಞಾನಿಗಳು, ಪರಿಣಿತ ತಂತ್ರಜ್ಞರು ಸ್ಥಳಕ್ಕೆ ಧಾವಿಸಿ ಬರುತ್ತಿದ್ದಾರೆ.
ತಜ್ಞರ ಭೇಟಿಯ ಬಳಿಕವೇ ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ವಿಜಯಪುರ ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ರಾಕೇಶ ಜೈನಾಪುರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.