ಪಾಂಡವಪುರ:ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಸಾವಿಗೆ ಕಾರಣನಾಗಿದ್ದ ವ್ಯಕ್ತಿಗೆ ನ್ಯಾಯಾಲಯ ೧೭ ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ನಿವಾಸಿ ಕೃಷ್ಣಾಚಾರಿ ಪುತ್ರ ಲೋಕೇಶಚಾರಿ ೧೭ ವರ್ಷ ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಲೋಕೇಶಚಾರಿ ಎಚ್.ಡಿ.ಕೋಟೆ ತಾಲೂಕಿನ ಅಗಸನಹುಂಡಿ ಗ್ರಾಮದ ನಿವಾಸಿಯಾದ ಸೋದಮಾವ ಸೋಮಚಾರಿ ಎಂಬುವರ ಪುತ್ರಿ ಎಸ್.ಸುಜಾತ ಅವರನ್ನು ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಲಾರಿ ಚಾಲಕನಾಗಿದ್ದ ಲೋಕೇಶಚಾರಿ ಪತ್ನಿ ಸುಜಾತಗೆ ತಮ್ಮ ಅಪ್ಪನ ಮನೆಯಿಂದ ವರದಕ್ಷಿಣೆ ಹಣ ನೀಡುವಂತೆ ಪದೇಪದೇ ಪೀಡಿಸುತ್ತ, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಸುಜಾತ ಮನೆಯವರು ಹಲವು ಬಾರಿ ನ್ಯಾಯಪಂಚಾಯಿತಿ ಮಾಡಿದರು ಸಮಾಧಾನಗೊಳ್ಳದ ಲೋಕೇಶಚಾರಿ ನಿತ್ಯ ಪತ್ನಿ ಸುಜಾತಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಕಿರುಕುಳ ತಾಳಲಾರದೆ ಸುಜಾತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಸುಜಾತ ಅವರ ತಂದೆ ಸೋಮಚಾರಿ ಪಟ್ಟಣದ ಪೊಲೀಸ್ ಠಾಣೆಗೆ ೨೦೧೫ ಫೆ.೧ರಂದು ಅಳಿಯ ಲೋಕೇಶಚಾರಿ ವಿರುದ್ದ ದೂರು ನೀಡಿದ್ದರು.
ದೂರುದಾಖಲಿಸಿಕೊಂಡ ಪೊಲೀಸರು ಲೋಕೇಶಚಾರಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪ್ರಕರಣ ಕುರಿತು ವಿಚಾರಣೆ ನಡೆಸಿದ ಶ್ರೀರಂಗಪಟ್ಟಣ ನ್ಯಾಯಾಲಯವು ಅಂತಿಮವಾಗಿ ಲೋಕೇಶಚಾರಿ ಅಪರಾಧಿ ಎಂದು ತೀರ್ಮಾನಿಸಿ ೧೭ ವರ್ಷಗಳ ಕಾಲ ಶಿಕ್ಷೆ ವಿಧಿಸಿ ನ್ಯಾಯಾಧೀಶ ಗೋಪಾಲಕೃಷ್ಣ ರೈ ಅವರು ಆದೇಶ ನೀಡಿದ್ದಾರೆ.