ಮೈಸೂರು(Mysuru): ಡಾ.ಅಂಬೇಡ್ಕರ್ ಚೇಂಬರ್ ಆಫ್ ಕಾಮರ್ಸ್ ಮತ್ತು ಲುಧಿಯಾನದ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಶಾಸಕರು ಮತ್ತು ಸಂಸದರ ವೇದಿಕೆ ನಡುವೆ ಶುಕ್ರವಾರ ಮೈಸೂರು ವಿಶ್ವವಿದ್ಯಾನಿಲಯ ಒಡಂಬಡಿಕೆ ಮಾಡಿಕೊಂಡಿದೆ.
ಡಾ. ಅಂಬೇಡ್ಕರ್ ಚೇಂಬರ್ ಆಫ್ ಕಾಮರ್ಸ್ ಸರ್ಕಾರೇತರ ಸಂಸ್ಥೆಯಾಗಿದ್ದು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಆರ್ಥಿಕ ಸಬಲೀಕರಣಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶಾಸಕರು ಮತ್ತು ಸಂಸದರ ವೇದಿಕೆಯ ಆಶ್ರಯದಲ್ಲಿ 2018ರಲ್ಲಿ ಸ್ಥಾಪಿತವಾಗಿದೆ.
ಸಂಸ್ಥೆಗಳು ಮುಂದಿನ ಪೀಳಿಗೆಗೆ ಉದ್ಯಮಿಗಳಾಗಲು ಸಹಾಯ ಮತ್ತು ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿವೆ. ಅದರಲ್ಲೂ ವಿಶೇಷವಾಗಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ವಿದ್ಯಾರ್ಥಿಗಳು, ಸ್ಟ್ಯಾಂಡಪ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಆತ್ಮನಿರ್ಭರ ಕಾರ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆಗೆ ಸಹಾಯ ಮಾಡುವುದು. ಹೊಸ ಕ್ಲಸ್ಟರ್ ಗಳು ಮತ್ತು ಇನ್ ಕ್ಯುಬೇಶನ್ ಸೆಂಟರ್‌ಗಳ ಸ್ಥಾಪನೆಗೆ ಸಹಾಯ ಮಾಡುವುದು, ಭಾರತ ಸರ್ಕಾರಗಳು ಪ್ರಾರಂಭಿಸಿದ ಎಲ್ಲಾ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಸಂಪರ್ಕಿಸುವ ಮತ್ತು ಉತ್ತೇಜಿಸುವ ಮೂಲಕ ಉದ್ಯಮಶೀಲತೆ ಮತ್ತು ಆರ್ಥಿಕ ಅಭಿವೃದ್ಧಿಯ ಮೂಲಕ ಅವರನ್ನು ಸಬಲೀಕರಣಗೊಳಿಸುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಗಳ ಒಟ್ಟಾರೆ ಕಲ್ಯಾಣಕ್ಕಾಗಿ ವೇದಿಕೆಯು ಕಾರ್ಯನಿರ್ವಹಿಸುತ್ತಿದೆ.
ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಚಟುವಟಿಕೆಗಳಿಗಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳಿಂದ ಆರ್ಥಿಕ ಬೆಂಬಲವನ್ನು ಕೋರಲು ಮತ್ತು ಸ್ವೀಕರಿಸಲು ಮತ್ತು ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಮಹಿಳೆಯರಿಗೆ ಕಾರ್ಯಕ್ರಮಗಳನ್ನು ಕಾರ್ಯಾಗಾರಗಳನ್ನು ಆಯೋಜಿಸುವುದು ಎಂದು ತಿಳಿಸಿದರು.
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಗ್ರಾಮೀಣ ಮಹಿಳೆಯರನ್ನು ಅವರ ಸ್ವ ಸಹಾಯ ಗುಂಪುಗಳನ್ನು ಸಂಘಟಿಸುವ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಅವರಿಗೆ ತರಬೇತಿ ಮತ್ತು ಉತ್ತೇಜಿಸುವುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಜನರಲ್ಲಿ ನಾಯಕತ್ವದ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಇದರ ಪ್ರಮುಖ ಉದ್ದೇಶ ಎಂದರು.
ಲುಧಿಯಾನದ ಡಾ.ಅಂಬೇಡ್ಕರ್ ಚೇಂಬರ್ ಆಫ್ ಕಾಮರ್ಸ್ ಕೇಂದ್ರದ ನಿರ್ದೇಶಕ ಇಂದರ್ ಇಕ್ಬಾಲ್ ಸಿಂಗ್ ಅತ್ವಾಲ್, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಮತ್ತು ವಿಸ್ತರಣೆ ಕೇಂದ್ರದ ನಿರ್ದೇಶಕರಾದ ನರೇಂದ್ರ ಕುಮಾರ್, ಸಮಾಜ ಕಾರ್ಯ ವಿಭಾಗದ ಡಾ.ಜ್ಯೋತಿ, ಕಾನೂನು ವಿಭಾದ ಅಧ್ಯಕ್ಷ ಪ್ರೊ.ರಮೇಶ್, ಪ್ರೊ.ಗಂಗಾಧರ್ ಸೇರಿದಂತೆ ಇತರರು ಇದ್ದರು.