ಮನೆ ಸುದ್ದಿ ಜಾಲ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆ ವಿಚಾರಧಾರೆಗಳು ಸದಾ ಕಾಲ ಪ್ರಸ್ತುತ: ಜಿಲ್ಲಾಧಿಕಾರಿ ಶಿಲ್ಪಾ ನಾಗ್

ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆ ವಿಚಾರಧಾರೆಗಳು ಸದಾ ಕಾಲ ಪ್ರಸ್ತುತ: ಜಿಲ್ಲಾಧಿಕಾರಿ ಶಿಲ್ಪಾ ನಾಗ್

0

ಚಾಮರಾಜನಗರ: ಸಮಾಜದ ಸರ್ವರ ಒಳಿತಿಗಾಗಿ ಸಂವಿಧಾನ ಶಿಲ್ಪಿ ಡಾ. ಬಿ ಆರ್. ಅಂಬೇಡ್ಕರ್ ಅವರು ಹೊಂದಿದ್ದ ದೂರದೃಷ್ಟಿ ಚಿಂತನೆಗಳು ವಿಚಾರಧಾರೆಗಳು ಸದಾ ಕಾಲ ಪ್ರಸ್ತುತವಾಗಿರುತ್ತವೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರವರ ವಿಚಾರಧಾರೆಗಳು ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ಹೊಂದಿದ್ದ ಸಮಾಜಮುಖಿ ಸರ್ವತೋಮುಖ ಬೆಳವಣಿಗೆಯ ಕುರಿತು ಚಿಂತನೆಗಳು ಎಲ್ಲಾ ಕಾಲಕ್ಕೂ ಅಗತ್ಯವಾಗಿವೆ. ಅಂದೇ ಅವರು ಚಿಂತನೆಯ ಬೀಜಗಳನ್ನು ಮೆದುಳಿನಲ್ಲಿ ಬಿತ್ತಿದರು. ಅವರ ಸಾಧನೆ ಹೋರಾಟವೆಲ್ಲವನ್ನು ನಾವು ಸದಾ ಸ್ಮರಿಸಬೇಕು ಎಂದು ಹೇಳಿದರು.

ಡಾ. ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ದಿನ ನಿತ್ಯವೂ ಕಲಿಯುವುದು ಸಾಕಷ್ಟಿದೆ. ಅಂಬೇಡ್ಕರ್ ಕುರಿತು ಪರಿಪೂರ್ಣವಾಗಿ ಎಲ್ಲವೂ ನನಗೆ ತಿಳಿದಿದೆ ಎಂದೂ ಹೇಳಲೂ ಸಾಧ್ಯವಿಲ್ಲ. ಮಹಾನ್ ಪ್ರತಿಭೆ, ವಿಶ್ವಜ್ಞಾನಿ ಅಂಬೇಡ್ಕರ್ ಬಗ್ಗೆ ಪ್ರತಿನಿತ್ಯವೂ ತಿಳಿದುಕೊಳ್ಳಬಾಕಾದ ವಿಷಯಗಳು ಬಹಳಷ್ಟಿವೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು. ವಿಧಾನ ಪರಿಷತ್ ಸದಸ್ಯರಾದ ಡಾ. ತಿಮ್ಮಯ್ಯ ಅವರು ಮಾತನಾಡಿ ಹಿಂದೆ ಹೆಣ್ಣು ಮಕ್ಕಳು ಅಕ್ಷರದಿಂದ ವಂಚಿತರಾಗಿದ್ದರು. ಮನೆಯ ಕೆಲಸಕ್ಕೆ ಸೀಮಿತರಾಗಿದ್ದ ಮಹಿಳೆಯರಿಗೆ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದವರು ಅಂಬೇಡ್ಕರ್ ಅವರು.

ಮೂಡನಂಬಿಕೆಗಳನ್ನು ಬಿಟ್ಟು ಶಿಕ್ಷಣಕ್ಕೆ ಪ್ರಾಧನ್ಯತೆ ನೀಡಿದಾಗ ಅಭಿವೃದ್ದಿ ಸಾದ್ಯ. ಹೀಗಾಗಿ ಡಾ ಬಿ. ಆರ್ ಅಂಬೇಡ್ಕರ್ ಅವರು ಹೇಳಿರುವಂತೆ ಪ್ರತಿಯೊಬ್ಬರ ಏಳಿಗೆ ಉನ್ನತಿ ಅವರವರ ಪರಿಶ್ರಮದಿಂದಲೆ ಸಾದ್ಯ ಎನ್ನುವುದನ್ನು ಅರಿಯಬೇಕು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ. ಓ ಕವಿತಾ ಅವರು ಮಾತನಾಡಿ ದೇಶ ಕಟ್ಟುವಲ್ಲಿ ಎಲ್ಲರ ಪಾತ್ರ ಇದೆ. ಡಾ. ಬಿ.ಆರ್ ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟರು. ನಮಗಿರುವ ಅವಕಾಶಗಳನ್ನು ಬಳಸಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೂ ಶಿಕ್ಷಣದಲ್ಲಿ ಸಾಧನೆ ಮಾಡಲು ಪ್ರೇರೆಪಿಸಬೇಕು ಎಂದು ತಿಳಿಸಿದರು.

ಡಾ. ಬಿ. ಆರ್ ಅಂಬೇಡ್ಕರ್ ಮತ್ತು ಬೌದ್ದ ತಾತ್ವಿಕತೆ ವಿಷಯ ಕುರಿತು ಮಾತನಾಡಿದ ತುiಕೂರಿನ ಬೌದ್ದ ಚಿಂತಕರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್ ನಟರಾಜ ಬೂದಾಳು ಅವರು ಬೌದ್ದ ಧರ್ಮ, ವಿಜ್ಞಾನ, ಪ್ರಜಾಸತ್ತೆಗೆ ಸಮಾನವಾದ ಸಂಬಂಧಗಳಿವೆ. ಸಮಾಜಕ್ಕೆ ಲೋಕಕ್ಕೆ ಓಳಿತು ಮಾಡಬೇಕೆಂದು ಬೌದ್ದರು ಹೇಳಿದ್ದಾರೆ. ಜಗತ್ತಿನಲ್ಲಿ ಪ್ರಶ್ನಿಸದೇ ಯಾವುದನ್ನು ಒಪ್ಪಿಕೊಳ್ಳಬಾರದು ನನ್ನನೂ ಸೇರಿದಂತೆ ಯಾರನ್ನು ಸಹಾ ಪ್ರಶ್ನಿಸದೇ ಓಪ್ಪಿಕೊಳ್ಳಬೇಡ ಎಂದು ಬುದ್ದ ಹೇಳಿದ್ದಾರೆ ಎಂದರು.

ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‌ರವರ ಸಾಮಾಜಿಕ ಹೋರಾಟಗಳ ತಾತ್ವಿಕತೆ ಕುರಿತು ಮಾತನಾಡಿದ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರು ಹಾಗೂ ಗಾಂಧಿ ಭವನದ ನಿರ್ದೇಶಕರಾದ ಪ್ರೊ. ಎಸ್. ನರೇಂದ್ರ ಕುಮಾರ್ ಅವರು ಅಂಬೇಡ್ಕರ್ ಅವರ ಹೋರಾಟಕ್ಕೆ ಬೆನ್ನಲುಬಾಗಿ ನಿಂತಿದ್ದು ಅವರ ಜ್ಞಾನ. ಅವರ ಹೋರಾಟಗಳ ಹಿಂದೆ ಸ್ವಂತ ಅನುಭವ ಇದೆ ದೇಶಗಳಲ್ಲಿ ಶಿಕ್ಷಣ ಪಡೆದರು. ಇಡೀ ಶಿಕ್ಷಣದ ಜ್ಞಾನದ ಅನುಭವಗಳನ್ನು ಬಳಸಿದ್ದು ಇಡೀ ಮಾನವ ಕುಲದ ವಿಮೋಚನೆಗಾಗಿ ಎಂಬುದು ಗಮನಾರ್ಹ ಎಂದರು.

ಇದೆ ವೇಳೆ ೨೦೨೫ನೇ ಸಾಲಿನ ರಾಜ್ಯ ಮಟ್ಟದ ಡಾ. ಬಿ. ಆರ್. ಅಂಬೇಡ್ಕರ್ ಪ್ರಶಸ್ತಿಗೆ (ಜನಪದ) ಆಯ್ಕೆಯಾಗಿರುವ ಜಿಲ್ಲೆಯ ಹೊನ್ನೂರು ಗೌರಮ್ಮ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹೊನ್ನೂರು ಗೌರಮ್ಮ ಅವರು ಪ್ರಶಸ್ತಿಗೆ ಗುರುತಿಸಲು ಹಿರಿಯ ಜಾನಪದ ಕಲಾವಿದರಾದ ಸಿ. ಎಂ. ನರಸಿಂಹ ಮೂರ್ತಿ ಅವರು ಕಾರಣರಾಗಿದ್ದಾರೆ. ನನಗೆ ಪ್ರಶಸ್ತಿ ಬಂದಿರುವುದಕ್ಕೆ ಸಂತಸವಾಗಿದೆ. ನನಗೆ ಸ್ವಂತ ಮನೆ ಇಲ್ಲ. ನಿವೇಶನವು ಇಲ್ಲ. ಈ ಸೌಲಭ್ಯವನ್ನು ಕಲ್ಪಿಸಬೇಕೆಂದು ಮನವಿ ಮಾಡಿದರು.

ಕೂಡಲೇ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ವೇದಿಕೆಯಲ್ಲಿಯೇ ಪ್ರತಿಕ್ರಿಯಿಸಿ ಪ್ರಶಸ್ತಿಯಿಂದ ನಮ್ಮ ಜಿಲ್ಲೆಗೆ ಹೆಮ್ಮೆ ಕೀರ್ತಿ ತಂದಿದ್ದೀರಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದ್ದೇನೆ. ಮನೆ ಹಾಗೂ ನಿವೇಶನ ವ್ಯವಸ್ಥೆ ಮಾಡಿಕೊಡಲಿದ್ದೇವೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಎನ್. ಮುನಿರಾಜು, ನಗರಸಭೆ ಪೌರಾಯುಕ್ತರಾದ ಎಸ್.ವಿ. ರಾಮದಾಸ್, ಡಾ. ಬಿ. ಆರ್. ಅಂಬೇಡ್ಕರ್ ಅಭಿವೃಧ್ದಿ ನಿಗಮದ ಜಿಲ್ಲಾ ವ್ಯವಸ್ಥಾಪರಾದ ರಾಜು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.