ಮನೆ ಕಾನೂನು ಸಾಮಾಜಿಕ ಮಾಧ್ಯಮಗಳು ಪೊಲೀಸರೊಂದಿಗೆ ಹಂಚಿಕೊಳ್ಳಬೇಕಾದ ಮಾಹಿತಿ ಕುರಿತ ಕೈಪಿಡಿ ರಚಿಸಿ: ದೆಹಲಿ ಹೈಕೋರ್ಟ್

ಸಾಮಾಜಿಕ ಮಾಧ್ಯಮಗಳು ಪೊಲೀಸರೊಂದಿಗೆ ಹಂಚಿಕೊಳ್ಳಬೇಕಾದ ಮಾಹಿತಿ ಕುರಿತ ಕೈಪಿಡಿ ರಚಿಸಿ: ದೆಹಲಿ ಹೈಕೋರ್ಟ್

0

ಮೆಟಾ ಮತ್ತು ಗೂಗಲ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳೊಂದಿಗೆ ಸಮನ್ವಯ ಸಾಧಿಸುವಂತೆ ಪೊಲೀಸರಿಗೆ ಕರೆ ನೀಡಿರುವ ದೆಹಲಿ ಹೈಕೋರ್ಟ್‌, ಪೊಲೀಸರು ತುರ್ತು ಹಾಗೂ ಅಪರಾಧ ತನಿಖೆಯ ಸಂದರ್ಭಗಳಲ್ಲಿ ಈ ವೇದಿಕೆಗಳಲ್ಲಿನ ಮಾಹಿತಿ ಹೇಗೆ ಪಡೆದು ಸಂರಕ್ಷಿಸಿಡಬಹುದು ಎಂಬ ಕುರಿತು ಕೈಪಿಡಿ ರೂಪಿಸುವಂತೆ ಸೂಚಿಸಿದೆ .

Join Our Whatsapp Group

ಸಾಮಾಜಿಕ ಮಾಧ್ಯಮ ಘಟಕಗಳು ಕಾನೂನು ಜಾರಿ ಸಂಸ್ಥೆಗಳಿಗೆ ಅಗತ್ಯವಿದ್ದಾಗ ಮಾಹಿತಿ ಒದಗಿಸಲು ಸಿದ್ಧವಾಗಿದ್ದರೂ, ಅಂತಹ ಮಾಹಿತಿ ಪಡೆಯಲು ಹೇಗೆ ವಿನಂತಿ ಮಾಡಿಕೊಳ್ಳಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣವಾಗಿ ತಿಳಿದಿರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಪ್ರತಿಭಾ ಎಂ ಸಿಂಗ್ ಮತ್ತು ಅಮಿತ್ ಶರ್ಮಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

ಇಂತಹ ಸಂದರ್ಭಗಳಿಂದಾಗಿ ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚುವ ಮತ್ತು ಅಂತಹ  ಅಪರಾಧಗಳ ತನಿಖೆಯ ಅಮೂಲ್ಯ ಸಮಯ ಹಾಳಾಗುತ್ತದೆ. ಇದನ್ನು ತಡೆಗಟ್ಟುವುದಕ್ಕಾಗಿ ದೆಹಲಿ ಪೊಲೀಸರು ಕೈಪಿಡಿ ರಚಿಸಬಹುದು ಎಂದು ಅದು ತಿಳಿಸಿದೆ.

ಪ್ರಸ್ತಾವಿತ ಕೈಪಿಡಿಯಲ್ಲಿ ವಿನಂತಿ ಮಾಡಬೇಕಾದ ವಿಧಾನದ ವಿವರಗಳು ಇರಬೇಕು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ನೇಮಕಗೊಂಡ ನೋಡಲ್ ಅಧಿಕಾರಿಗಳ ವಿವರಗಳನ್ನು ಅದರಲ್ಲಿ ಸೇರಿಸಬಹುದು ಎಂದು ನ್ಯಾಯಾಲಯ ವಿವರಿಸಿತು. 

ಅಲ್ಲದೆ ಇದಕ್ಕೆ ಅಗತ್ಯವಾದ ತರಬೇತಿಯನ್ನು ಪೊಲೀಸರಿಗೆ ನೀಡಬಹುದು ಎಂದು  ನಾಪತ್ತೆಯಾಗಿರುವ ಬಾಲಕನ ಪೋಷಕರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಯ ವಿಚಾರಣೆ ವೇಳೆ ಅದು ತಿಳಿಸಿದೆ.

ಕಾಣೆಯಾದ ಹುಡುಗನ ಇನ್‌ಸ್ಟಾಗ್ರಾಮ್ ಖಾತೆ, ಫೋನ್ ಸಂಖ್ಯೆ, ಸ್ಥಳ/ಐಪಿ ವಿಳಾಸ ಮತ್ತು ಬಳಸುತ್ತಿರುವ ಸಾಧನದ ಐಎಂಇಐ ಮಾಹಿತಿಯನ್ನು ಒದಗಿಸುವಂತೆ ಮೆಟಾಗೆ ಪತ್ರ ಬರೆದಿದ್ದರೂ ಅದು ಮಾಹಿತಿ ನೀಡಿರಲಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಹೀಗಾಗಿ ನ್ಯಾಯಾಲಯ ಮೆಟಾಗೆ ನೋಟಿಸ್ ಜಾರಿ ಮಾಡಿ ನೆರವು ಕೇಳಿತ್ತು. ಅಲ್ಲದೆ, ನಾಪತ್ತೆಯಾದ ವ್ಯಕ್ತಿಗಳ ಪ್ರಕರಣಗಳು ಅಥವಾ ನಕಲಿ ಬಾಂಬ್ ಬೆದರಿಕೆಗಳಂತಹ ತುರ್ತು ಸಂದರ್ಭಗಳಲ್ಲಿ ಪೊಲೀಸರಿಂದ ಮಾಹಿತಿ ಪಡೆಯಲು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಮಾಹಿತಿಯ ಸ್ವೀಕೃತಿಗೆ ಸಂಬಂಧಿಸಿದಂತೆ ವಿಳಂಬ ಉಂಟಾಗುತ್ತಿರುವುದು ನ್ಯಾಯಾಲಯದ ಗಮನಕ್ಕೆ ಬಂದಿತ್ತು. ಹೀಗಾಗಿ ಕೈಪಿಡಿ ತಯಾರಿಸುವಂತೆ ಅದು ತಿಳಿಸಿತ್ತು.  ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 11 ರಂದು ನಡೆಯಲಿದೆ.