ಮಂಡ್ಯ : ಪಂಚ ನದಿಗಳ ಬೀಡು ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಉದ್ಭವಿಸಬಹುದಾದ 239 ಸಂಭವನೀಯ ಗ್ರಾಮಗಳನ್ನ ಪಟ್ಟಿ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಜಟಿಲವಾದರೂ ಆಶ್ಚರ್ಯ ಪಡುವಂತಿಲ್ಲ.
ಬೇಸಿಗೆಗೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಭಾವ ಉಂಟಾಗುವ ಗ್ರಾಮಗಳನ್ನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ಈಗಾಗಲೇ ಪಟ್ಟಿ ಮಾಡಿಕೊಂಡಿದ್ದು, ಬೇಸಿಗೆಯಲ್ಲಿ ನೀರಿನ ದಾಹ ನೀಗಿಸಲು ಸಿದ್ಧತೆ ಕೈಗೊಂಡಿದ್ದಾರೆ. ಆದರೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವ ಗ್ರಾಮಗಳ ಸಂಖ್ಯೆ ಪಟ್ಟಿಯಲ್ಲಿ ಇಲ್ಲದಿರುವುದು ಸಮಾಧಾನದ ಸಂಗತಿಯಾಗಿದೆ. ಆದರೆ, ಈ ನಡುವೆ ಮಂಡ್ಯ ತಾಲ್ಲೂಕಿನ ಮೊಳೆಕೊಪ್ಪಲು ಗ್ರಾಮದಲ್ಲಿ ಈಗಾಗಲೇ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇದು ಎಚ್ಚರಿಕೆ ಗಂಟೆಯಾಗಿದೆ.
ಬೇಸಿಗೆಗೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉದ್ಭವಿಸಬಹುದಾದ ಒಟ್ಟು 239 ಗ್ರಾಮಗಳನ್ನ ಗುರುತು ಮಾಡಿದ್ದು, 206 ಖಾಸಗಿ ಬೋರ್‌ವೆಲ್‌ಗಳನ್ನ ಗುರುತಿಸಲಾಗಿದೆ. ಉಳಿದಂತೆ ಜಿಲ್ಲೆಯಲ್ಲಿ 33 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಉದ್ದೇಶಿಸಿರುವ ಗ್ರಾಮಗಳನ್ನ ಗುರುತು ಮಾಡಲಾಗಿದೆ. ಈ ಗ್ರಾಮಗಳಿಗೆ ಯಾವುದೇ ಸಂದರ್ಭದಲ್ಲೂ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಅದಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇರುವ ಸಂಭಾವ್ಯ ಗ್ರಾಮಗಳನ್ನು ಗುರುತಿಸಿ ನೀರಿನ ದಾಹ ನೀಗಿಸಲು ಸಿದ್ಧತೆ ಮಾಡಿಕೊಂಡಿದೆ.
ಮುಂದಿನ ದಿನಗಳಲ್ಲಿ ಇದೇ ರೀತಿ ಬಿಸಿಲಿನ ವಾತಾವರಣವಿದ್ದಿದ್ದೆ ಆದಲ್ಲಿ, ಈ ಸಮಸ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಹೆಚ್ಚಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಪಂಚ ನದಿಗಳು ಹರಿದರೂ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗುತ್ತಿರುವುದು ವಿಪಾರ್ಯಸವೇ ಸರಿ. ಜಿಲ್ಲೆಯಲ್ಲಿ ಬೇಸಿಗೆಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಬಹುದಾದ 239 ಗ್ರಾಮಗಳನ್ನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ತಾಲ್ಲೂಕುವಾರು ಪಟ್ಟಿ ಮಾಡಿದೆ. ಕೆ.ಆರ್ ಪೇಟೆ 67, ಮದ್ದೂರು 29, ಮಳವಳ್ಳಿ 31, ಮಂಡ್ಯ 32, ನಾಗಮಂಗಲ 43, ಪಾಂಡವಪುರ 27 ಹಾಗೂ ಶ್ರೀರಂಗಪಟ್ಟಣ 10 ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುವ ಸಾಧ್ಯತೆ ಇರುವ ಬಗ್ಗೆ ಪಟ್ಟಿ ತಯಾರಿಸಿ, ಮುಂಜಾಗ್ರತ ಕ್ರಮ ಅನುಸರಿಸಿದೆ.
ಪಂಚ ನದಿಗಳ ಬೀಡಲ್ಲು ನೀಗದ ದಾಹ : ಜಿಲ್ಲೆಯಲ್ಲಿ ಕಾವೇರಿ, ಹೇಮಾವತಿ, ಲೋಕಪಾವನಿ, ಶಿಂಷಾ ಹಾಗೂ ವೀರ ವೈಷ್ಣವಿ ಪಂಚ ನದಿಗಳು ಜಿಲ್ಲಾ ವ್ಯಾಪ್ತಿಯಲ್ಲಿ ಹರಿದರೂ ಪ್ರತಿ ವರ್ಷ ಬೇಸಿಗೆಗೆ ಕುಡಿಯುವ ನೀರಿಗೆ ಅಭಾವ ಉಂಟಾಗುತ್ತಿರುವುದು ಮಾತ್ರ ದುರ್ದೈವವೇ ಸರಿ.
206 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ಗಳೇ ಗತಿ : ಕುಡಿಯುವ ನೀರಿಗೆ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇರುವುದರಿಂದ ಜಿಲ್ಲಾ ಪಂಚಾಯಿತಿ 206 ಖಾಸಗಿ ಕೊಳವೆ ಬಾವಿಗಳನ್ನ ಗುರುತಿಸಿಕೊಂಡಿದೆ. ಗ್ರಾಮಗಳಿಗೆ ಕುಡಿಯುವ ನೀರು ಅಭಾವ ಸೃಷ್ಟಿಯಾದರೆ ಖಾಸಗಿ ಬೋರ್‌ವೆಲ್‌ಗಳ ಮೂಲ ನೀರು ಪೂರೈಸಲು ಸಿದ್ದತೆ ಮಾಡಿಕೊಂಡಿದೆ. ತಾಲ್ಲೂಕುವಾರು ಖಾಸಗಿ ಬೋರ್‌ವೆಲ್ ಗುರುತಿಸಿದ್ದು, ಕೆ.ಆರ್ ಪೇಟೆ 55, ಮದ್ದೂರು 29, ಮಳವಳ್ಳಿ 30, ಮಂಡ್ಯ 32, ನಾಗಮಂಗಲ 43, ಪಾಂಡವಪುರ 21 ಹಾಗೂ ಶ್ರೀರಂಗಪಟ್ಟಣ 4 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನ ಗುರುತಿಸಲಾಗಿದೆ.
ನಿಷ್ಕೃಯಗೊಂಡ 42 ಶುದ್ಧ ಕುಡಿಯುವ ನೀರಿನ ಘಟಕಗಳು : ಜಿಲ್ಲೆಯಲ್ಲಿ ಒಟ್ಟು 677 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಈ ಪೈಕಿ 615 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, 42 ಶುದ್ಧ ಕುಡಿಯುವ ನೀರಿನ ಘಟಕಗಳು ವಿವಿಧ ಕಾರಣಗಳಿಂದ ಸ್ಥಗಿತಗೊಂಡಿವೆ. ಕೆ.ಆರ್.ಪೇಟೆಯಲ್ಲಿ 83 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಪೈಕಿ 3 ನಿಷ್ಕ್ರಿಯಗೊಂಡಿವೆ. ಮದ್ದೂರಲ್ಲಿ 98 ಘಟಕಗಳಿದ್ದು, 2 ಘಟಕಗಳು ಸ್ಥಗಿತಗೊಂಡಿವೆ.
ಮಳವಳ್ಳಿಯಲ್ಲಿ ಒಟ್ಟು 88 ಘಟಕಗಳಿದ್ದು, 13 ರಿಪೇರಿಗೆ ಬಂದಿವೆ. ಮಂಡ್ಯ ತಾಲ್ಲೂಕಿನಲ್ಲಿ 165 ನೀರಿನ ಘಟಕಗಳಿದ್ದು, ಅದರಲ್ಲಿ 5 ರಿಪೇರಿಯಾಗಬೇಕಿದೆ. ನಾಗಮಂಗಲದಲ್ಲಿ 87 ಶುದ್ದ ನೀರಿನ ಘಟಕಗಳಿದ್ದು, ಈ ಪೈಕಿ 8 ಘಟಕಗಳು ಸ್ಥಗಿತಗೊಂಡಿವೆ. ಪಾಂಡವಪುರ 81 ಶುದ್ಧ ನೀರಿನ ಘಟಕಗಳಿದ್ದು, 5 ರಿಪೇರಿ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ 75 ಶುದ್ದ ನೀರಿನ ಘಟಕಗಳಿದ್ದು, 6 ಘಟಕಗಳು ಕೆಲಸ ನಿರ್ವಹಿಸುತ್ತಿಲ್ಲ. ಇದರಲ್ಲಿ ಕೆಲವು ಕಡೆ ಶುದ್ದ ಕುಡಿಯುವ ನೀರಿನ ಕಾಯಿನ್ ಬಾಕ್ಸ್‌ಗಳೇ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕೆಲವು ವಿದ್ಯುತ್ ಸಮಸ್ಯೆ ಹಾಗೂ ತಾಂತ್ರಿಕ ಸಮಸ್ಯೆಯಿಂದ ನೆನೆಗುದಿಗೆ ಬಿದ್ದಿವೆ.
ಪ್ರತೀ ಸೋಮವಾರ ಕ್ಷೇತ್ರ ಭೇಟಿ ನಡೆಸಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಇನ್ನಿತರೆ ಸಮಸ್ಯೆಗಳ ಬಗ್ಗೆ ಪರಿಶೀಲಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಕಡೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನೀರು ಪೂರೈಸಲಾಗುವುದು. ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸಿದ್ದತೆ ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಎಂದು ಜಿಪಂ ಸಿಇಓ ಕೆ.ಆರ್.ನಂದಿನಿ ತಿಳಿಸಿದ್ದಾರೆ.















