ಮನೆ ಕಾನೂನು ನಿರ್ವಾಹಕ ಸಾವು: ಪರಿಹಾರ ಪಾವತಿ ಹೊಣೆಯನ್ನು ಬಸ್‌ ಮಾಲೀಕನಿಂದ ವಿಮಾ ಕಂಪೆನಿಗೆ ವರ್ಗಾಯಿಸಿದ ಹೈಕೋರ್ಟ್‌

ನಿರ್ವಾಹಕ ಸಾವು: ಪರಿಹಾರ ಪಾವತಿ ಹೊಣೆಯನ್ನು ಬಸ್‌ ಮಾಲೀಕನಿಂದ ವಿಮಾ ಕಂಪೆನಿಗೆ ವರ್ಗಾಯಿಸಿದ ಹೈಕೋರ್ಟ್‌

0

ನಿವಾರ್ಹಕರೊಬ್ಬರು ಬಸ್‌ ಮೆಟ್ಟಿಲಿನಿಂದ (ಫುಟ್‌ ಬೋರ್ಡ್‌) ಕೆಳಗೆ ಬಿದ್ದು ಸಾವನ್ನಪ್ಪಿದ ಪ್ರಕರಣದಲ್ಲಿ ಪರಿಹಾರ ಪಾವತಿಯ ಹೊಣೆಯನ್ನು ಬಸ್‌ ಮಾಲೀಕನಿಂದ ವಿಮಾ ಕಂಪೆನಿಗೆ ವಹಿಸಿ ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಮೃತ ವ್ಯಕ್ತಿಯು ಬಸ್‌ ಕ್ಲೀನರ್ ಆಗಿದ್ದು, ಅವರು ವಿಮಾ ಪಾಲಿಸಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ವಿಮಾ ಕಂಪೆನಿ ವಾದವನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಉಮೇಶ್ ಎಂ.ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠ ತಿರಸ್ಕರಿಸಿದ್ದು, ಖಾಸಗಿ ಬಸ್‌ವೊಂದರ ಮಾಲೀಕ ಟಿ ಶಾಂತ ಕುಮಾರ್‌ ಅವರ ಅರ್ಜಿಯನ್ನು ಪುರಸ್ಕರಿಸಿದೆ.

8.58 ಲಕ್ಷ ರೂಪಾಯಿ ಪರಿಹಾರ ಪಾವತಿಯನ್ನು ಹೊಣೆಯನ್ನು ಬಸ್‌ ಮಾಲೀಕನಿಗೆ ಹೊರಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ಸರಿಯಲ್ಲ. ಅಪಘಾತ ನಡೆದ ದಿನದಂದು ನಿರ್ವಾಹಕನ ಕೆಲಸವನ್ನು ಮೃತ ವ್ಯಕ್ತಿ ನಿರ್ವಹಿಸಿರುವುದು ಸಾಕ್ಷ್ಯಧಾರಗಳಿಂದ ಸಾಬೀತಾಗಿದೆ. ಹೀಗಾಗಿ, ವಿಮಾ ಕಂಪೆನಿಯೇ ಮೃತನ ಕುಟುಂಬದವರಿಗೆ ಪರಿಹಾರ ಪಾವತಿಸಬೇಕು. ಅದರಂತೆ ಎಂಟು ವಾರದಲ್ಲಿ ಪರಿಹಾರ ಮೊತ್ತವನ್ನು ಠೇವಣಿ ಇಡಬೇಕು. ನಂತರ ಆ ಮೊತ್ತವನ್ನು ನ್ಯಾಯಾಧಿಕರಣವು ಮೃತನ ಕುಟುಂಬದವರಿಗೆ ಬಿಡುಗಡೆ ಮಾಡಬೇಕು. ನ್ಯಾಯಾಧಿರಣದ ಆದೇಶದಂತೆ ಬಸ್‌ ಮಾಲೀಕರು ಏನಾದರೂ ಠೇವಣಿಯಿಟ್ಟಿದ್ದರೆ, ಅದನ್ನು ಅವರಿಗೆ ಹಿಂದಿರುಗಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ಪ್ರಯಾಣಿಕರು ಇಳಿಯಲು ಮತ್ತು ಹತ್ತಲು ಅನುಕೂಲ ಮಾಡಿಕೊಡುವುದು ನಿರ್ವಾಹಕರ ಕರ್ತವ್ಯ. ಈ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿ ಅಪಘಾತ ನಡೆದ ದಿನದಂದು ಪ್ರಯಾಣಿಕರಿಗೆ ಬಸ್ ಹತ್ತಲು ಮತ್ತು ಇಳಿಯಲು ವ್ಯವಸ್ಥೆ ಮಾಡಿಕೊಡುತ್ತಿದ್ದರು. ಬಸ್ ನಿಲ್ಲಿಸಲು ಮತ್ತು ಮುಂದಕ್ಕೆ ಚಲಾಯಿಸಲು ಚಾಲಕನಿಗೆ ಸೂಚನೆ ನೀಡುತ್ತಿದ್ದರು. ಹೀಗಾಗಿ, ಅವರೇ ಬಸ್ಸಿನ ನಿರ್ವಾಹಕ ಎಂಬುದು ಸಾಬೀತಾಗಿದೆ ಎಂದು ಪೀಠ ಹೇಳಿದೆ.

ಮೂಡಿಗೆರೆ ತಾಲ್ಲೂಕಿನ ಪೀಲಾಪುರ ಗೇಟ್ ಬಸ್ ನಿಲ್ದಾಣದಲ್ಲಿ ಚಾಲಕ ನಿರ್ಲಕ್ಷ್ಯದಿಂದ ಬಸ್‌ ಚಲಾಯಿಸಿದ ಕಾರಣ ಫುಟ್‌ ಬೋಡ್‌ ನಲ್ಲಿ ನಿಂತಿದ್ದ ನಿರ್ವಾಹಕ ಕೆಳಗೆ ಬಿದ್ದಿದ್ದಾನೆ. ಆಗ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾನೆ. ಹೀಗಾಗಿ, ಪ್ರಕರಣದಲ್ಲಿ ವಿಮಾ ಕಂಪೆನಿಯೇ ಮೃತನ ಕುಟುಂಬವರಿಗೆ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್‌ ಹೇಳಿದೆ.

ಪ್ರಕರಣದ ಹಿನ್ನೆಲೆ: ಚಿಕ್ಕಮಗಳೂರಿನ ತರೀಕೆರೆ ತಾಲ್ಲೂಕಿನ ನಿವಾಸಿ ಟಿ ಶಾಂತಕುಮಾರ್ ಅವರು ಖಾಸಗಿ ಬಸ್‌ವೊಂದರ ಮಾಲೀಕರಾಗಿದ್ದಾರೆ. ಆ ಬಸ್ಸಿನಲ್ಲಿ ಲೋಹಿತ್ ಕುಮಾರ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದರು. 2018ರ ಫೆಬ್ರವರಿ 5ರಂದು ಪೀಲಾಪುರ ಗೇಟ್ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬಸ್‌ನ ಫುಟ್‌ಬೋರ್ಡ್‌ನಲ್ಲಿ ನಿಂತಿದ್ದ ಲೋಹಿತ್‌ (35), ಆಯಾತಪ್ಪಿ ಕಳೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದರು. ಲೋಹಿತ್ ಅವರ ತಾಯಿ ಮತ್ತು ಸಹೋದರ ಅವರ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು.

ಲೋಹಿತ್ ಬಸ್ಸಿನ ನಿರ್ವಾಹಕ ಅಲ್ಲ. ಅವರು ಕೇವಲ ಕ್ಲೀನರ್ ಆಗಿದ್ದು, ವಿಮಾ ಪಾಲಿಸಿ ವ್ಯಾಪ್ತಿಗೆ ಅವರು ಒಳಪಡುವುದಿಲ್ಲ. ಬಸ್‌ ಮಾಲೀಕರು ವಿಮಾ ಪಾಲಿಸಿಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಬಸ್ಸಿಗೆ ವಿಮಾ ಸೌಲಭ್ಯ ಕಲ್ಪಿಸಿದ್ದ ಕಂಪೆನಿ ವಾದಿಸಿತ್ತು.

ಇದನ್ನು ಪರಿಗಣಿಸಿದ್ದ ಮೋಟಾರು ವಾಹನಗಳ ಪರಿಹಾರ ನ್ಯಾಯಾಧಿಕರಣ (ಎಂಎಸಿಟಿ), ಬಸ್‌ನ ಕ್ಲೀನರ್‌ನ ಅಪಾಯವನ್ನು ವಿಮಾ ಪಾಲಿಸಿ ಒಳಗೊಂಡಿಲ್ಲ. ವಿಮಾ ಪಾಲಿಸಿಯ ನಿಯಮಗಳನ್ನು ಬಸ್‌ ಮಾಲೀಕರು ಉಲ್ಲಂಘಿಸಿದ್ದಾರೆ. ಆದ್ದರಿಂದ, ಅವರೇ ಮೃತನ ಸಾವಿಗೆ ಪರಿಹಾರ ಪಾವತಿಸುವ ಜವಾಬ್ದಾರಿ ಹೊಂದಿದ್ದು, ಮೃತ ಲೋಹಿತ್ ಅವರ ತಾಯಿ ಮತ್ತು ಸಹೋದರನಿಗೆ 8,58,500 ರೂಪಾಯಿ ಪರಿಹಾರ ಪಾವತಿಸಬೇಕು ಎಂದು 2019ರ ಆಗಸ್ಟ್‌ 6ರಂದು ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಹೈಕೊರ್ಟ್‌ ಗೆ ಮೆಲ್ಮನವಿ ಸಲ್ಲಿಸಿದ್ದ ಶಾಂತ ಕುಮಾರ್‌ ಅವರು ಮೃತ  ಲೋಹಿತ್ ಬಸ್ಸಿನಲ್ಲಿ ನಿರ್ವಾಹಕರಾಗಿದ್ದರು. ಈ ಅಂಶವನ್ನು ನ್ಯಾಯಾಧಿಕರಣ ಪರಿಗಣಿಸಿಲ್ಲ. ವಿಮಾ ಪಾಲಿಸಿಯ 28ನೇ ಷರತ್ತಿನ ಅನ್ವಯ ಪಾಲಿಸಿಯ ವ್ಯಾಪ್ತಿಗೆ ಬಸ್‌ ಚಾಲಕ, ನಿರ್ವಾಹಕ ಮತ್ತು ಕ್ಲೀನರ್‌ ಒಳಪಡುತ್ತಾರೆ. ಹೀಗಾಗಿ, ಮೃತನ ಕುಟುಂಬದವರಿಗೆ ಪರಿಹಾರ ಪಾವತಿಸುವುದು ವಿಮಾ ಕಂಪೆನಿಯ ಹೊಣೆಯಾಗಿದೆ ಎಂದು ವಾದಿಸಿದ್ದರು. ಈ ವಾದವನ್ನು ವಿಮಾ ಕಂಪೆನಿ ಅಲ್ಲಗೆಳೆದಿತ್ತು.

ಹಿಂದಿನ ಲೇಖನಬುರುಡೆ ಜಲಪಾತ
ಮುಂದಿನ ಲೇಖನಆಹಾರದಲ್ಲಿ ಕೊಬ್ಬಿನ ಅಂಶ