ಮನೆ ರಾಜ್ಯ ಬರ ಘೋಷಣೆ ಸಂಬಂಧ 2-3 ದಿನದಲ್ಲಿ ಸಭೆ: ಚಲುವರಾಯಸ್ವಾಮಿ

ಬರ ಘೋಷಣೆ ಸಂಬಂಧ 2-3 ದಿನದಲ್ಲಿ ಸಭೆ: ಚಲುವರಾಯಸ್ವಾಮಿ

0

ಧಾರವಾಡ: ಶಾಸಕರು, ರೈತರಿಂದ ಬರಗಾಲ ಘೋಷಣೆಗೆ ಆಗ್ರಹ ಕೇಳಿ ಬಂದಿದೆ. ಈ ಬಗ್ಗೆ ಈಗಾಗಲೇ ಸಿಎಂ ಕ್ಯಾಬಿನೆಟ್ ಉಪಸಮಿತಿ ಮಾಡಿದ್ದಾರೆ. ಬರ ಘೋಷಣೆ ಸಂಬಂಧ ಎರಡ್ಮೂರು ದಿನದಲ್ಲಿ ಸಭೆ ನಡೆಯಲಿದೆ ಎಂದು ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಕೃಷಿಮೇಳದಲ್ಲಿ ಮಾತನಾಡಿದ ಅವರು, 62 ತಾಲೂಕುಗಳನ್ನು ಬರ ಎಂದು ಘೋಷಣೆಗೆ ಅವಕಾಶವಿತ್ತು. ಆದರೆ ಇನ್ನೂ 130 ತಾಲೂಕುಗಳನ್ನು ಸೇರಿಸಲು ಮುಂದಾಗಿದ್ದೇವೆ. ರಾಜ್ಯದ 196 ತಾಲೂಕುಗಳಲ್ಲಿ ಬರ ಇದೆ. ಎಲ್ಲಾ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದೇವೆ ಎಂದು ತಿಳಿಸಿದರು.

ಬರ ಘೋಷಣೆ ಸಂಬಂಧ ಕೇಂದ್ರ ಸರ್ಕಾರಕ್ಕೆ ಮಾರ್ಗಸೂಚಿಯಲ್ಲಿ ಬದಲಾವಣೆ ಕೇಳಿದ್ದೇವೆ. ಎರಡು ಮೂರು ಬಾರಿ ಕೇಳಿದರೂ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ.

ರೈತರ ಬೆನ್ನಿಗೆ ನಿಲ್ಲುವ ಏಕೈಕ ಸಮರ್ಥ ನಾಯಕ ಸಿದ್ದರಾಮಯ್ಯ. ರೈತರಿಗೆ ಸಾಕಷ್ಟು ಸಮಸ್ಯೆ, ನೋವು ಇದೆ, ಸವಾಲುಗಳು ಇವೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರೈತರಿಗೆ ನೆರವಾಗಿದ್ದರು. ಈ ಹಿಂದೆ ರಾಜ್ಯ ರೈತರ ಸಾಲ ಮನ್ನಾ ಮಾಡಿದ್ದರು. ಹಾಲಿನ ಸಬ್ಸಿಡಿ 5 ರೂ.ಗೆ ಏರಿಸಿದ ಕೀರ್ತಿ ಸಿದ್ದರಾಮಯ್ಯಗೆ ಸಲ್ಲಬೇಕು. ರೈತರಿಗೆ ಜೆಡಿಎಸ್-ಬಿಜೆಪಿ ಏನು ಕೊಟ್ಟಿತು? ನೀವೇ ವಿಚಾರ ಮಾಡಿ ಎಂದರು.

ಕೊಟ್ಟ ಭರವಸೆಯಂತೆ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದಾರೆ. ದೇಶದಲ್ಲಿ ಯಾರೂ ಮಾಡದ ಕಾರ್ಯಕ್ರಮವನ್ನ ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಗ್ಯಾರಂಟಿಗಳ ಬಗ್ಗೆ ಪ್ರಧಾನಿ ಮೋದಿ, ವಿಪಕ್ಷದವರು ಟೀಕಿಸಿದ್ದರು. ಎಲ್ಲರ ಟೀಕೆಗಳನ್ನ ಮೆಟ್ಟಿನಿಂತು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದಾರೆ ಎಂದು ಹೇಳಿದ್ದಾರೆ.