ಹೈದರಾಬಾದ್: ಡ್ರಗ್ಸ್ ಪಾರ್ಟಿಯೊಂದರ ಮೇಲೆ ಪೊಲೀಸರು ರೇಡ್ ಮಾಡಿದ್ದು ಖ್ಯಾತ ನೃತ್ಯ ಸಂಯೋಜಕ ಬಂಧಿಸಿರುವುದಾಗಿ ವರದಿಯಾಗಿದೆ.
ಭಾನುವಾರ (ಡಿ.1ರಂದು) ಮಾದಾಪುರದ ಓಯೋ ರೂಮ್ ನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನೃತ್ಯ ಸಂಯೋಜಕ ಕನ್ಹಾ ಮಹಂತಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಮಾದಾಪುರದ ಓಯೋ ರೂಮ್‌ನಲ್ಲಿ ಕನ್ಹಾ ಮಹಂತಿ, ಪ್ರಿಯಾಂಕಾ ರೆಡ್ಡಿ, ಗಂಗಾಧರ್ ಹಾಗೂ ಶಾಕಿ ಎಂಬುವವರು ಪಾರ್ಟಿ ಮಾಡುತ್ತಿದ್ದರು. ಈ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಆಗುತ್ತಿತ್ತು. ಈ ಪಾರ್ಟಿಯನ್ನು ಪ್ರಿಯಾಂಕಾ ಅವರು ಆಯೋಜಿಸಿದ್ದರು ಎನ್ನಲಾಗಿದ್ದು, ಕನ್ಹಾ ಪ್ರಿಯಾಂಕ ಅವರ ಒಳ್ಳೆಯ ಸ್ನೇಹಿತ ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಪಾರ್ಟಿ ನಡೆಯುವ ಸ್ಥಳಕ್ಕೆ ದಾಳಿ ನಡೆಸಿದ್ದು, ಕನ್ಹಾ ಮಹಂತಿ, ಪ್ರಿಯಾಂಕಾ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಸ್ಥಳದಿಂದ ಪೊಲೀಸರು ಎಂಡಿಎಂಎ 18 ಗ್ರಾಂ ಗಾಂಜಾ ಮತ್ತು ಎಲ್‌ಎಸ್‌ಡಿ ಪೇಪರ್ ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿರುವ ಆಫ್ರಿಕನ್ ಪ್ರಜೆಯಿಂದ ಡ್ರಗ್ಸ್ ಪೂರೈಕೆ ಆಗುತ್ತಿತ್ತು ಎಂದು ಪೊಲೀಸರು ಹೇಳಿರುವುದಾಗಿ ವರದಿಯಾಗಿದೆ.
ಕನ್ಹಾ ಜನಪ್ರಿಯ ಡ್ಯಾನ್ಸ್ ಶೋ ʼಧೀʼಯಲ್ಲಿ ನೃತ್ಯ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದರು.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆ ರಾಕುಲ್ ಪ್ರೀತ್ ಸಿಂಗ್ ಸಹೋದರನ ಹೆಸರು ಕೂಡ ಡ್ರಗ್ಸ್ ಕೇಸ್‌ನಲ್ಲಿ ಕೇಳಿ ಬಂದಿತ್ತು. ಇದಲ್ಲದೆ ರಾಜ್ ತರುಣ್ ಹಾಗೂ ಲಾವಣ್ಯ, ನಟಿ ಹೇಮಾ ಅವರ ಹೆಸರು ಕೂಡ ಡ್ರಗ್ಸ್ ವಿಚಾರದಲ್ಲಿ ಕೇಳಿ ಬಂದಿತ್ತು.