ಬೆಂಗಳೂರು: ಸೆಂಟ್ರಲ್ ಕ್ರೈಂ ಬ್ರಾಂಚ್(ಸಿಸಿಬಿ) ಹಾಗೂ ಬೆಂಗಳೂರಿನ ಚಿಕ್ಕಜಾಲ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ೧೦ ಕೋಟಿ ರೂಪಾಯಿ ಮೌಲ್ಯದ ೫.೩೨ ಕೆಜಿ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಿದ್ದಾರೆ ಮತ್ತು ೨೫ ವರ್ಷದ ನೈಜಿರಿಯನ್ ಮಹಿಳೆಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅಕಿನ್ವುನ್ಮಿ ಪ್ರಿನ್ಸೆಸ್ ಇಫೆಯೊಲು ಎಂದು ಗುರುತಿಸಲಾಗಿದ್ದು, ಈ ಮಹಿಳೆ ಕಳೆದ ಮೂರು ವರ್ಷದ ಹಿಂದೆ ವಿದ್ಯಾರ್ಥಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದರು ಮತ್ತು ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದಳು. ಚಿಕ್ಕಜಾಲ ಠಾಣಾ ವ್ಯಾಪ್ತಿಯ ರಾಜಾನುಕುಂಟೆ ಬಳಿ ಡ್ರಗ್ಸ್ ವ್ಯಾಪಾರ ಮಾಡುವಾಗ ಈ ಮಹಿಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಬಂಧಿತ ಪ್ರಿನ್ಸಸ್‌ನಿಂದ ೧೦ ಕೋಟಿ ರೂ. ಮೌಲ್ಯದ ೫.೩೨೫ ಕೆಜಿ ಎಂಡಿಎಂಎ ಜಪ್ತಿ ಮಾಡಿದ್ದಾರೆ.
ಅಕ್ಟೋಬರ್ ೨೦೨೧ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಪ್ರಿನ್ಸಸ್, ಆರಂಭದಲ್ಲಿ ನವದೆಹಲಿಯಲ್ಲಿ ವಾಸ ಮಾಡಿದ್ದಳು. ನಂತರ ತೆಲಂಗಾಣ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುವುದಾಗಿ ಎಜುಕೇಷನ್ ವೀಸಾ ಪಡೆದಿದ್ದಳು. ಆದ್ರೆ, ಕಾಲೇಜಿಗೆ ದಾಖಲಾಗದೇ ಡ್ರಗ್ ಪೆಡ್ಲಿಂಗ್‌ಗೆ ಇಳಿದಿದ್ದಳು.
ದೆಹಲಿಯಿಂದ ಬೆಂಗಳೂರಿಗೆ ಬಸ್ ಮೂಲಕ ಡ್ರಗ್ ಸಾಗಾಟ ಮಾಡಿದ್ದು, ಚಿಕ್ಕಜಾಲ ಠಾಣಾ ವ್ಯಾಪ್ತಿಯ ರಾಜಾನುಕುಂಟೆ ಬಳಿ ವ್ಯಾಪಾರ ಮಾಡುವಾಗ ಸಿಕ್ಕಿಬಿದ್ದಿದ್ದಾಳೆ. ಈ ಸಂಬಂಧ ಚಿಕ್ಕಜಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.














