ಮೈಸೂರು(Mysuru): ಸದಾ ಗಿಜಿಗುಡುತ್ತಾ, ಯುವ ಮನಸ್ಸುಗಳು ಲವಲವಿಕೆಯಿಂದ ಓಡಾಡಿಕೊಂಡಿರುವ ವಾತಾವರಣದಲ್ಲಿ ಬುಧವಾರ ಭಾವುಕತೆ ಆವರಿಸಿಕೊಂಡಿತ್ತು. ಐನೆಕ್ಸ್ ಚಿತ್ರಮಂದಿರದ ಆವರಣದಲ್ಲಿ ಮಾತಿಗೆ ಆಸ್ಪದವೇ ಇರಲಿಲ್ಲ. ಹೇಳಬೇಕಾದ್ದೆಲ್ಲ ಎಲ್ಲರ ಮುಖ ಭಾವನೆಯಲ್ಲಿಯೇ ವ್ಯಕ್ತವಾಗುತ್ತಿತ್ತು.
ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ನೆನಪಿನಲ್ಲಿ ನಡೆದ ಚಲನಚಿತ್ರೋತ್ಸವವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಉದ್ಘಾಟಿಸಿದರು.
ಚಿತ್ರಮಂದಿರ ಆವರಣದಲ್ಲಿ ಕಾರ್ಯಕ್ರಮದ ಉದ್ಘಾಟನೆಗಾಗಿ ಇಡಲಾಗಿದ್ದ ಕುರ್ಚಿಯಲ್ಲಿ ಆಸೀನರಾಗಿರುವ ಭಂಗಿʼಯಲ್ಲಿ ಇರುವ ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಚಾಲನೆ ನೀಡಲಾಯಿತು.
೨ನೇ ಸ್ಕ್ರೀನ್‌ನ ಮಂದಿರದ ಒಳಗೆ ಅವರು ಪ್ರವೇಶಿಸುತ್ತಿದ್ದಂತೆ, ಅಲ್ಲಿ ಕುಳಿತ್ತಿದ್ದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಪ್ಪುವಿಗೆ ಜೈಕಾರ ಹಾಕಿದರು. ಅಶ್ವಿನಿ ಅವರು ಅವರತ್ತ ಕೈ ಬೀಸಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಮುಂದಿನ ಸಾಲಿನ ಆಸನದಲ್ಲಿ ಕುಳಿತುಕೊಂಡರು, ರಾಷ್ಟ್ರಗೀತೆ ಶುರುವಾಗುತ್ತಿದ್ದಂತೆ ಎದ್ದು ನಿಂತು ಗೌರವ ಸಲ್ಲಿಸಿದರು. ಅಮೇಲೆ “ರಾಜಕುಮಾರʼ ಚಿತ್ರ ತೆರೆಯ ಮೇಲೆ ಮೂಡಿ ಬರಲು ಶುರುವಾಯಿತು. ಒಂದೆರಡು ಕ್ಷಣವಿದ್ದು ಬಳಿಕ ಗಣ್ಯರ ಜತೆಗೂಡಿ ಚಿತ್ರಮಂದಿರದಿಂದ ಹೊರಗೆ ನಿರ್ಗಮಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ. ರೂಪ ಯೋಗೇಶ್, ಚಲನಚಿತ್ರೋತ್ಸವ ಉಪ ಸಮಿತಿ ಅಧ್ಯಕ್ಷ ಹೊಸಳ್ಳಿ ವೆಂಕಟೇಶ್, ಉಪಾಧ್ಯಕ್ಷರಾದ ಸಿ.ಎಂ.ಮಹದೇವಯ್ಯ, ಪಾಟೀಲ, ಕಿರಣ್ ಜಯರಾಮೇಗೌಡ, ಸದಸ್ಯರಾದ ಉದಿತ್‌ಗೌಡ, ರಘು, ಉಪ ವಿಶೇಷಾಧಿಕಾರಿ ಆರ್.ಶೇಷ, ಕಾರ್ಯದರ್ಶಿ ಟಿ.ಕೆ.ಹರೀಶ್ ಮತ್ತಿತರರು ಹಾಜರಿದ್ದರು.
ಉದ್ಘಾಟನಾ ಪ್ರದರ್ಶನವಾಗಿ `ರಾಜಕುಮಾರʼ
ಬುಧವಾರ ಬೆಳಗ್ಗೆ 10 ಗಂಟೆಗೆ “ಬೆಟ್ಟದ ಹೂವುʼ ಪ್ರದರ್ಶನದ ಮೂಲಕ ಅಪ್ಪು ಚಿತ್ರ ಉತ್ಸವಕ್ಕೆ ಚಾಲನೆ ನೀಡಬೇಕಿತ್ತು. ಆದರೆ ಕಾರ್ಯಕ್ರಮವನ್ನು ಮಧ್ಯಾಹ್ನ 12.30ಕ್ಕೆ ನಿಗದಿಗೊಳಿಸಲಾಯಿತು. ಉದ್ಘಾಟನಾ ಸಮಯದಲ್ಲಿ “ರಾಜಕುಮಾರʼ ಚಲನಚಿತ್ರವು ಪ್ರದರ್ಶನವಾಯಿತು. ನಿಗದಿಯಾದಂತೆ ಬೆಟ್ಟದ ಹೂವು 10ಕ್ಕೆ ಪ್ರದರ್ಶನಗೊಂಡು, ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು.