ಮನೆ ರಾಜ್ಯ ದಸರಾ: ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

ದಸರಾ: ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

0

ಕುಂದಾಪುರ: ದಸರಾ ಹಬ್ಬದ ಸಂದರ್ಭ ಬೆಂಗಳೂರಿನಿಂದ ಕರಾವಳಿಯ ಊರಿಗೆ ಬರಲು ಟಿಕೆಟ್‌ ಸಿಗದೇ ಸಮಸ್ಯೆಗೆ ಸಿಲುಕಿದ್ದ ನಾಗರಿಕರಿಗೆ ಸಂಸದರು ಹೊಸ ಸುದ್ದಿ ನೀಡಿದ್ದಾರೆ.

Join Our Whatsapp Group

ಬೆಂಗಳೂರು, ಮಂಗಳೂರು, ಉಡುಪಿ, ಕುಂದಾಪುರ, ಕಾರವಾರ ಭಾಗದ ಪ್ರಯಾಣಿಕರ ನೆರವಿಗೆ ವಿಶೇಷ ರೈಲು ಓಡಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಡಿದ ಮನವಿಯಂತೆ ನೈಋತ್ಯ ರೈಲ್ವೇ ಅ. 10 ಹಾಗೂ ಅ. 12ರಂದು ವಿಶೇಷ ರೈಲುಗಳನ್ನು ಹೊರಡಿಸುವುದಾಗಿ ಪ್ರಕಟಿಸಿದೆ.

ಕುಂದಾಪುರ ರೈಲು ಹಿತರಕ್ಷಣ ಸಮಿತಿಯ ಗಣೇಶ್‌ ಪುತ್ರನ್‌ ಅವರು ಬಸ್‌ ಮತ್ತು ಈಗಿರುವ ರೈಲುಗಳ ಟಿಕೆಟ್‌ ಸಂಪೂರ್ಣ ಖಾಲಿಯಾದ ಬಗ್ಗೆ ಸಂಸದರ ಗಮನ ಸೆಳೆದಿದ್ದರು. ಬಸ್‌ ಟಿಕೆಟ್‌ ದರ ಏರಿಕೆಯೂ ಆಗಿದೆ. ಇದಕ್ಕೆ ತತ್‌ಕ್ಷಣವೇ ಸ್ಪಂದಿಸಿದ ಸಂಸದರು ರೈಲ್ವೇ ಇಲಾಖೆಗೆ ನವರಾತ್ರಿ ವಿಶೇಷ ರೈಲುಗಳ ಪ್ರಯಾಣಕ್ಕೆ ಸೂಚನೆ ನೀಡಿದ್ದರು.

ಮೈಸೂರಿನಿಂದ ಮೆಜೆಸ್ಟಿಕ್‌ ಮಾರ್ಗವಾಗಿ ಒಂದು ರೈಲು ಮತ್ತೂಂದು ರೈಲು ಯಶವಂತಪುರದಿಂದ ಹೊರಡಲಿದೆ. ಈ ಬಗ್ಗೆ ಸಂಸದರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿದ್ದಾರೆ.

ರೈಲಿನ ವೇಳಾಪಟ್ಟಿ ಹೀಗಿದೆ

ಅ. 10 ಗುರುವಾರ ರಾತ್ರಿ 12.30ಕ್ಕೆ ಯಶವಂತಪುರದಿಂದ ಹೊರಡುವ ರೈಲು (ನಂ. 06569) ಪಡೀಲ್‌ ಬೈಪಾಸ್‌ ಮೂಲಕ ಶುಕ್ರವಾರ ಬೆ. 11.30ಕ್ಕೆ ಉಡುಪಿ ತಲುಪಿ ಸಂಜೆ 4ಕ್ಕೆ ಕಾರವಾರ ತಲುಪಲಿದೆ.

ಅ. 11ರ ಶುಕ್ರವಾರ ರಾತ್ರಿ 11.30ಕ್ಕೆ ಕಾರವಾರದಿಂದ ಹೊರಡುವ ರೈಲು (06570) ಕುಂದಾಪುರ ಮಧ್ಯ ರಾತ್ರಿ 2ಕ್ಕೆ ಉಡುಪಿ 2.40 ತಲುಪಿ ಮರುದಿನ ಮಧ್ಯಾಹ್ನ 1ಕ್ಕೆ ಯಶವಂತಪುರ ಹಾಗೂ ಸಂಜೆ 4.40ಕ್ಕೆ ಮೈಸೂರು ತಲುಪಲಿದೆ.

ಅ. 12ರ ಶನಿವಾರ ರಾತ್ರಿ 9.20ಕ್ಕೆ ಮೈಸೂರಿನಿಂದ ಹೊರಟು (06585) ಮೆಜೆಸ್ಟಿಕ್‌ನಿಂದ ರಾತ್ರಿ 12.20 ಹಾಗೂ 12.40ಕ್ಕೆ ಯಶವಂತಪುರದಿಂದ ಹೊರಟು ಪಡೀಲ್‌ ಬೈಪಾಸ್‌ ಮೂಲಕ ರವಿವಾರ ಬೆ. 11.30ಕ್ಕೆ ಉಡುಪಿ ತಲುಪಿ 4ಕ್ಕೆ ಕಾರವಾರ ತಲುಪಲಿದೆ.

ಅ.13ರ ರವಿವಾರ ರಾತ್ರಿ 11.30ಕ್ಕೆ ಕಾರವಾರದಿಂದ ಹೊರಟು (06586) ಉಡುಪಿಗೆ ಮಧ್ಯರಾತ್ರಿ 2.40 ತಲುಪಿ ಅ. 14ರ ಸೋಮವಾರ ಮಧ್ಯಾಹ್ನ ಯಶವಂತಪುರ 1ಕ್ಕೆ ಮತ್ತು ಸಂಜೆ 4.40ಕ್ಕೆ ಮೈಸೂರು ಸಂಜೆ 4.40 ಕ್ಕೆ ತಲುಪಲಿದೆ.