ಮೈಸೂರು(Mysuru): ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ದಸರೆಯ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಯಲ್ಲಿ ಭಾಗವಹಿಸಲಿರುವ ಆನೆಗಳ ಪಟ್ಟಿಯನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ.
ಹುಣಸೂರು ತಾಲ್ಲೂಕು ವೀರನಹೊಸಳ್ಳಿಯಲ್ಲಿ, ಆ.7ರಂದು ಬೆಳಿಗ್ಗೆ 9.01ರಿಂದ 9.35ರವರೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ‘ಗಜಪಯಣ’ಕ್ಕೆ ಚಾಲನೆ ದೊರೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗಜಪೂಜೆ ನೆರವೇರಿಸಿ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.
7 ಆನೆಗಳು ಮೊದಲ ಹಂತದಲ್ಲಿ ಮೈಸೂರು ತಲುಪಲಿವೆ. ಮೊದಲನೇ ತಂಡದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನದ ವೀರನಹೊಸಳ್ಳಿ ಬಳಿ ಸಾಂಪ್ರದಾಯಿಕ ಪೂಜೆ ನೆರವೇರಲಿದೆ. ಈ ಸಂದರ್ಭ ತೆಂಗಿನಕಾಯಿ, ಬೆಲ್ಲ ಮತ್ತು ಕಬ್ಬನ್ನು ನೀಡಿ ಆನೆಗಳನ್ನು ಸ್ವಾಗತಿಸಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಸಾಂಪ್ರದಾಯಿಕ ಪೂಜೆ ನಂತರ ಆನೆಗಳನ್ನು ಲಾರಿಯ ಮೂಲಕ ಮೈಸೂರಿಗೆ ಸಾಗಾಣಿಕೆ ಮಾಡಲಾಗುತ್ತದೆ.
ಈ ಬಾರಿ ಭಾಗವಹಿಸಲಿರುವ ಮೊದಲ ತಂಡದ ಆನೆಗಳನ್ನು ವೀರನಹೊಸಹಳ್ಳಿ-ಹುಣಸೂರು-ಬಿಳಿಕೆರೆ-ಇಲವಾಲ ಹೆದ್ದಾರಿಯ ಮೂಲಕ ಮೈಸೂರು ನಗರದ ಅರಣ್ಯ ಭವನದ ಆವರಣಕ್ಕೆ ಸಾಗಿಸಲಾಗುತ್ತದೆ.
ಆ.10ರಂದು ಅರಣ್ಯ ಭವನದಲ್ಲಿ ಆನೆಗಳ ಸಾಂಪ್ರಾದಾಯಿಕ ಪೂಜೆ ನಂತರ ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿಗೆ ಕರೆತರಲಾಗುತ್ತದೆ. ಅಲ್ಲಿ, ಮೈಸೂರು ಅರಮನೆ ಮಂಡಳಿ ಹಾಗೂ ಜಿಲ್ಲಾಡಳಿತದಿಂದ ಅರಮನೆ ಆವರಣಕ್ಕೆ ಸಂಭ್ರಮದಿಂದ ಬರಮಾಡಿಕೊಳ್ಳಲಾಗುತ್ತದೆ.
ಅನೆಗಳ ವಿವರ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು (57), ಭೀಮ (22), ಮಹೇಂದ್ರ (39), ಗೋಪಾಲಸ್ವಾಮಿ (39).
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಬಳ್ಳೆ ಆನೆ ಶಿಬಿರದ ಅರ್ಜುನ (63).* ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದ ವಿಕ್ರಮ (59), ಧನಂಜಯ (44), ಕಾವೇರಿ (45), ಗೋಪಿ (41), ಶ್ರೀರಾಮ (40), ವಿಜಯ (63).
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಪುರ ಆನೆ ಶಿಬಿರದ ಚೈತ್ರಾ (49), ಲಕ್ಷ್ಮಿ (21) ಹಾಗೂ ಪಾರ್ಥಸಾರಥಿ (18).
ಆನೆಗಳನ್ನು ನೋಡಿಕೊಳ್ಳುವ ಸಿಬ್ಬಂದಿಯ ಕುಟುಂಬದವರಿಗೆ ಅರಮನೆ ಆವರಣಲ್ಲಿ ತಾತ್ಕಾಲಿಕವಾಗಿ ನೀರು ನಿರೋಧಕ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಆನೆಗಳಿಗೆ ಪ್ರತಿನಿತ್ಯ ವಿಶೇಷ ಆಹಾರ ಪದಾರ್ಥಗಳನ್ನು ನೀಡುವುದರೊಂದಿಗೆ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ತಾಲೀಮು ನಡೆಸಲಾಗುವುದು. ಜನಸಂದಣಿ ಹಾಗೂ ವಾಹನಗಳ ಶಬ್ದಗಳಿಗೆ ಹೆದರದಂತೆ ಅನುಭವ ಆಗಲೆಂದು ತಾಲೀಮಿನಲ್ಲಿ ಆದ್ಯತೆ ಕೊಡಲಾಗುತ್ತದೆ. ಕುಶಾಲತೋಪುಗಳನ್ನು ಸಿಡಿಸುವ ಮೂಲಕವೂ ತರಬೇತಿಯನ್ನು ನೀಡಲಾಗುತ್ತದೆ.
– ವಿ.ಕರಿಕಾಳನ್, ಡಿಸಿಎಫ್














