ಮಂಜು ಪಾಂಡವಪುರ ನಿರ್ದೇಶನದ ಶೈಕ್ಷಣಿಕ – ಸಾಮಾಜಿಕ ಮೌಲ್ಯ ಬಿಂಬಿಸುವ ” ಮಾತಂಗಿ ದೀವಟಿಗೆ ” ಕನ್ನಡ ಚಲನಚಿತ್ರ ಇಂದು ಮಧ್ಯಾಹ್ನ 1.15ಕ್ಕೆ ಮಾಲ್ ಆಫ್ ಮೈಸೂರ್ ನ ಐನೊಕ್ಸ್ 3 ನೇ ಅಡಿಟೋರಿಯಂ ನಲ್ಲಿ ಪ್ರದರ್ಶನವಾಗಲಿದೆ.
ಕಲಬುರ್ಗಿಯ ಪ್ರೊ . ಸಮತಾ ಬಿ ದೇಶಮಾನೆಯವರ ಆತ್ಮಕಥೆ ಆಧಾರಿತ ” ಮಾತಂಗಿ ದೀವಟಿಗೆ ” ಕನ್ನಡ ಚಲನಚಿತ್ರವು ದೇಶ ಮಾನ್ಯ ಸಂಸ್ಥೆಯ ವತಿಯಿಂದ ನಿರ್ಮಾಣವಾಗಿದ್ದು ಬೆಂಗಳೂರಿನಲ್ಲಿ ಜರುಗಿದ್ದ 13ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ತದನಂತರ ಹಲವಾರು ಕಡೆ ಪ್ರದರ್ಶನಗಳಾಗಿ ಕೆಲವು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದೆ.
ಕಲ್ಬುರ್ಗಿ ಗಾಜಿಪುರ ಪ್ರದೇಶದ ಬಾಬುರಾವ್ ಹಾಗೂ ರತ್ನಮ್ಮ ಎಂಬ ದಂಪತಿಗಳ ಮಕ್ಕಳ ಸಾಧನೆ ಈ ಚಿತ್ರದ ಕಥಾ ವಸ್ತು.
ಶಿಕ್ಷಣ ಹಾಗೂ ಸಾಮಾಜಿಕ ವಲಯದಲ್ಲಿ ಈ ಕುಟುಂಬದ ಏಳು ಜನ ಅಕ್ಕ ತಂಗಿಯರು ಹಾಗೂ ಒಬ್ಬ ಸಹೋದರ ಸಾಧನೆ ತೋರಿದ್ದಾರೆ. ಮೊದಲನೆಯವರು ಅಂತರಾಷ್ಟ್ರೀಯ ಖ್ಯಾತ ಕ್ಯಾನ್ಸರ್ ವಿಭಾಗದ ವೈದ್ಯೆ ಡಾಕ್ಟರ್ ವಿಜಯಲಕ್ಷ್ಮಿ ದೇಶಮಾನೆ.
ಕಿದ್ವಾಯಿ ಆಸ್ಪತ್ರೆಯಲ್ಲಿ ಹಲವಾರು ರೋಗಿಗಳಿಗೆ ಕ್ಯಾನ್ಸರ್ ಚಿಕಿತ್ಸೆಯನ್ನು ನಿರ್ವಹಿಸಿ, ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರಾಗಿ ಪ್ರಸ್ತುತ ನಿವೃತ್ತರಾಗಿ ಬೆಂಗಳೂರು ಬಸವನಗುಡಿ ಡಿವಿಜಿ ರಸ್ತೆಯಲ್ಲಿನ ” ಅಬಲಾಶ್ರಮ”ದಲ್ಲಿ ಇದ್ದಾರೆ.
ಇದು ಒಬ್ಬರ ಸಾಧನೆ ಆದರೆ ಇದೇ ರೀತಿ ಇನ್ನುಳಿದ ಸಹೋದರಿಯರು ಬಡತನದಲ್ಲಿ ಬೆಳೆದು ಶೈಕ್ಷಣಿಕ ಸಾಧನೆಯಲ್ಲಿ ಮಾಡಿದ ಸಾಧನೆಯ ಈ ಚಲನಚಿತ್ರವನ್ನು’ ದೇಶ ಮಾನ್ಯ ಕ್ರಿಯೇಶನ್ಸ್ ” ಸಂಸ್ಥೆಯ ವತಿಯಿಂದ ಡಾ. ಜಿ. ವೈ. ಪದ್ಮ ನಾಗರಾಜು ನಿರ್ಮಾಣ ಮಾಡಿದ್ದಾರೆ.
ತಾಂತ್ರಿಕ ವಿಭಾಗದಲ್ಲಿ ಛಾಯಾಗ್ರಹಣ ಪಿ ವಿ ಆರ್ ಸ್ವಾಮಿ, ಮೇಕಪ್ ಮಾರುತಿ, ಸಂಕಲನ ಮನೋಜ್, ಸಂಗೀತ ಸಚಿನ್ ನಗರ್ಥ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಜಯಂ ಪ್ರಹ್ಲಾದ್ ಬರೆದಿದ್ದು, ನಿರ್ದೇಶನವನ್ನು” ಭೃಂಗದ ಬೆನ್ನೇರಿ ” ಹಿರಿಮನೆ ಎಸ್ಟೇಟ್ ” ಸ್ಮಶಾನ ಮೌನ ” ಹಾಗೂ” ನಿರ್ಗಮನದ ಹಾದಿಯಲ್ಲಿ ” ಎಂಬ ಕಲಾತ್ಮಕ ಚಲನಚಿತ್ರಗಳನ್ನು ನಿರ್ದೇಶಿಸಿದ್ದ ” ಮಂಜು ಪಾಂಡವಪುರ ” ವಹಿಸಿದ್ದಾರೆ.
ಕಲಾವಿದರಾಗಿ ಬೆಳಗಾವಿಯ ಡಿಎಸ್ ಚೌಗಲೆ, ಹನುಮಕ್ಕ ಮರಿಯಮ್ಮನಹಳ್ಳಿ, ಶ್ರೀನಿವಾಸ ಪ್ರಭು, ಮುರಳಿಧರ ಕೌಶಿಕ್, ಸಮತ ದೇಶ ಮಾನೆ, ವಿಜಯಲಕ್ಷ್ಮಿ ದೇಶಮಾನೆ, ಅಮೃತ, ರಾಘವೇಂದ್ರ, ಅನುರಾಧ, ವೀಣಾ ಪಾಟೀಲ್, ಪ್ರಭಾಕರ್ ಜೋಶಿ, ಲಕ್ಷ್ಮಿ ಶ್ರೀನಿವಾಸ್, ಸುರೇಶ್ ಅನ್ನಪೂರ್ಣ ಪಬ್ಲಿಕೇಶನ್, ಗೀತಾ ಶಿವಮೊಗ್ಗ ಇನ್ನಿತರ ಕಲಾವಿದರ ಜೊತೆಗೆ ಕಲಬುರ್ಗಿಯ ಸಮಸ್ತ ಕಲಾವಿದರುಗಳು ನಟಿಸಿದ್ದಾರೆ.