ಮೈಸೂರು(Mysuru): ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಎರಡನೇ ತಂಡದ ಆನೆಗಳಿಗೆ ಇಂದು ತೂಕ ಹಾಕುವ ಪ್ರಕ್ರಿಯೆ ನಡೆದಿದ್ದು, ಮೊದಲ ತಂಡದಲ್ಲಿ ಆಗಮಿಸಿದ ಆನೆಗಳ ತೂಕವು ನಡೆಯಿತು.
ದಸರಾ ಗಜಪಡೆಗಳ ತೂಕ ಪ್ರಕ್ರಿಯೆಯು ನಗರದ ಧನ್ವಂತ್ರಿಯಲ್ಲಿನ ವೇ ಬ್ರಿಡ್ಜ್ ನಲ್ಲಿ ನಡೆದಿದ್ದು, ಈ ಬಾರಿಯೂ ಅರ್ಜನನೇ ಬಲಶಾಲಿ ಅಂತ ನಿರೂಪಿಸಿದ್ದಾನೆ.
ತೂಕದಲ್ಲಿ ಅರ್ಜುನನೇ ಬಲಶಾಲಿಯಾಗಿದ್ದು, ಬರೋಬ್ಬರಿ 5885 ಕೆ.ಜಿ ತೂಕ ಹೊಂದಿದ್ದಾನೆ. ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು 5000, ಚೈತ್ರ 3235, ಭೀಮಾ 4345, ಗೋಪಾಲಸ್ವಾಮಿ 5460, ಮಹೇಂದ್ರ 4450, ವಿಜಯ 2760, ಗೋಪಿ 4670, ಧನಂಜಯ 4890, ಶ್ರೀರಾಮ 4475, ಲಕ್ಷ್ಮೀ 3150, ಸುಗ್ರೀವ 4785, ಕಾವೇರಿ 3245 ಇನ್ನೂ ಈ ಗಜಪಡೆಯಲ್ಲಿ ಕಿರಿಯವನಾಗಿರುವ ಪಾರ್ಥಸಾರಥಿ 3445 ಕೆಜಿ ತೂಕವನ್ನು ಹೊಂದಿದ್ದಾರೆ.
ಈ ಸಂದರ್ಭ ಡಿಸಿಎಫ್ ಡಾ.ವಿ. ಕರಿಕಾಳನ್ ಮಾತನಾಡಿ, ಈ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲು ಮತ್ತು ಎರಡನೇ ತಂಡದ ಆನೆಗಳು ಒಟ್ಟು ಸೇರಿ 14 ಆನೆಗಳನ್ನು ನಾವು ತೂಕ ಮಾಡಿದ್ದೇವೆ, ಎರಡನೇ ತಂಡದ ಎಲ್ಲ ಗಂಡಾನೆಗಳೂ 4000 ದಿಂದ 4600 ಸಾವಿರ ಕೆಜಿ ವರೆಗೂ ಇದ್ದು, ಕಿರಿಯ ವಯಸ್ಸಿನ ಆನೆಯಾಗಿರುವ ಪಾರ್ಥಸಾರಥಿ ಆನೆ 3445 ತೂಕ ಹೊಂದಿದೆ, ಮೊದಲನೇ ತಂಡದ ಎಲ್ಲ ಆನೆಗಳ ತೂಕದಲ್ಲಿ ಹೆಚ್ಚಾಗಿದ್ದು, ನಮ್ಮ ತಾಲೀಮುಗಳಿಗೂ ಕೂಡ ತುಂಬ ಚೆನ್ನಾಗಿ ಸಹಕರಿಸುತ್ತಿವೆ ಎಂದು ತಿಳಿಸಿದರು.
ಈ ದಿನ ಮೊದಲನೇ ಬಾರಿಗೆ ಎಲ್ಲಾ 14 ಆನೆಗಳನ್ನು ತೂಕ ಮಾಡುವ ಸಲುವಾಗಿ ಅರಮನೆಯಿಂದ ಹೊರ ಕರೆತಂದಿದ್ದು, ಶ್ರೀರಾಮ ಮತ್ತು ಪಾರ್ಥಸಾರಥಿ ಆನೆಗಳು ಮೊದಲನೇ ತಂಡದ ಆನೆಗಳ ಜೊತೆ ಸೇರಿ ನಿನ್ನೆಯಿಂದಲೇ ತಾಲೀಮಿನಲ್ಲಿ ಭಾಗವಹಿಸಿವೆ. ಸೆ.12 ರಿಂದ ಎಲ್ಲ ಆನೆಗಳು ತಾಲೀಮಿನಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.