ಮನೆ ರಾಜ್ಯ ಪ್ರಧಾನಮಂತ್ರಿ ಸಂಚರಿಸುವ ರಸ್ತೆಗಳಲ್ಲಿ ದಸರಾ ಮಾದರಿ ದೀಪಾಲಂಕಾರ: ಎಸ್.ಟಿ.ಸೋಮಶೇಖರ್

ಪ್ರಧಾನಮಂತ್ರಿ ಸಂಚರಿಸುವ ರಸ್ತೆಗಳಲ್ಲಿ ದಸರಾ ಮಾದರಿ ದೀಪಾಲಂಕಾರ: ಎಸ್.ಟಿ.ಸೋಮಶೇಖರ್

0

ಮೈಸೂರು (Mysuru): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು  ತಂಗುವ ಹೋಟೆಲ್, ಸಂಚರಿಸುವ ರಸ್ತೆಗಳಲ್ಲಿ ಕೈಗೊಳ್ಳಬೇಕಿರುವ ಭದ್ರತೆ, ರಸ್ತೆಗಳ ಸ್ಥಿತಿಗತಿಗಳನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ವೀಕ್ಷಣೆ ಮಾಡಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಪ್ರಧಾನಮಂತ್ರಿಗಳು ಮೈಸೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಪಾದಚಾರಿ ಮಾರ್ಗಗಳ ದುರಸ್ತಿ, ರಸ್ತೆಗಳ ಡಾಂಬರೀಕರಣಕ್ಕೆ 15 ಕೋಟಿ ರೂ. ವೆಚ್ಚವಾಗಲಿದೆ ಎಂದು ಪಾಲಿಕೆ ಅಂದಾಜು ಮಾಡಲಾಗಿದ್ದು, 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

15 ರಸ್ತೆಗಳ ಡಾಂಬರೀಕರಣ, ಪಾದಚಾರಿ ಮಾರ್ಗ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಮಂಗಳವಾರ ಮಳೆಯಾದ ಹಿನ್ನೆಲೆಯಲ್ಲಿ ಎರಡು ರಸ್ತೆಗಳ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆ ನಿಂತ ಕೂಡಲೇ ಆ ರಸ್ತೆಗಳ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಹೇಳಿದರು.

ಬೀದಿದೀಪಗಳ ವ್ಯವಸ್ಥೆ, ದಸರಾ ವೇಳೆ ದೀಪಾಲಂಕರ ಮಾಡುವಂತೆ ಪ್ರಧಾನಮಂತ್ರಿಗಳು ಭೇಟಿ ನೀಡುವ ಅರಮನೆ, ಅವರು ಸಂಚರಿಸುವ ರಸ್ತೆಗಳಲ್ಲಿ ದೀಪಾಲಂಕಾರ ಮಾಡಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಾಹನಗಳ ಪಾರ್ಕಿಂಗ್ ಸ್ಥಳಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಗುರುತಿಸಲಿದ್ದಾರೆ ಎಂದರು.

ಕಳೆದ ಮೂರು ವರ್ಷಗಳಿಂದ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂವಾದ ನಡೆಸಲಿದ್ದಾರೆ. ಎಷ್ಟು ಜನರೊಂದಿಗೆ ಸಂವಾದ ನಡೆಸಬೇಕು ಎಂಬುದರ ಬಗ್ಗೆ ಕೇಂದ್ರ ಸರ್ಕಾರ ನೀಡುವ ನಿರ್ದೇಶನದಂತೆ ಆಯೋಜಿಸಲಾಗುವುದು ಎಂದು ತಿಳಿಸಿದರು.

ಸಂವಾದ ಕಾರ್ಯಕ್ರಮ ವೀಕ್ಷಿಸಲು 60 ಸಾವಿರ ಜನರಿಗೆ ವ್ಯವಸ್ಥೆ ಮಾಡಲಾಗಿದೆ. ಒಂದು ಕಡೆ 30 ಸಾವಿರ,  ಎರಡು ಕಡೆಗಳಲ್ಲಿ ತಲಾ 15 ಸಾವಿರ ಜನರು ಕಾರ್ಯಕ್ರಮ ವೀಕ್ಷಿಸಬಹುದಾಗಿದೆ ಎಂದರು.

ಪ್ರಧಾನಮಂತ್ರಿ ಜೊತೆ ಯಾರು ವೇದಿಕೆ ಹಂಚಿಕೊಳ್ಳಬೇಕು ಎಂಬುದರ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಲಿದ್ದು ಅದರಂತೆ ಪಾಲನೆ ಮಾಡಲಾಗುವುದು. ಸುತ್ತೂರು ಮಠ, ಚಾಮುಂಡಿ ಬೆಟ್ಟ ವೀಕ್ಷಣೆ ಮಾಡುವಂತೆ ಪ್ರಧಾನಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಇದೇ ವೇಳೆ ಸಂಸದರಾದ ಪ್ರತಾಪ್ ಸಿಂಹ, ಶಾಸಕರುಗಳಾದ ನಾಗೇಂದ್ರ, ರಾಮದಾಸ್, ಮೇಯರ್ ಸುನಂದಾ ಪಾಲನೇತ್ರಾ ಸೇರಿದಂತೆ ಹಲವು ಅಧಿಕಾರಿಗಳು ಜೊತೆಯಲ್ಲಿದ್ದರು.