ಮೈಸೂರು : ಕರ್ನಾಟಕ ರಾಜ್ಯ ಅಹಿಂದ ಒಕ್ಕೂಟದ ಅಧ್ಯಕ್ಷರನ್ನಾಗಿ ಹಿರಿಯ ಹೋರಾಟಗಾರ, ಜನಪರ ಮುಖಂಡ ದ್ಯಾವಪ್ಪ ನಾಯಕ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಶನಿವಾರ ಮೈಸೂರು ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಸತ್ಯನಾರಾಯಣ, ಗೌರವಾಧ್ಯಕ್ಷ ಬಿ.ಜಿ.ಕೇಶವ ಮತ್ತು ಸವಿತಾ ಸಮಾಜದ ಮೈಸೂರು ಜಿಲ್ಲಾ ಅಧ್ಯಕ್ಷ ನಾಗೇಶ ಅವರ ನೇತೃತ್ವದಲ್ಲಿ ಅಹಿಂದ ವರ್ಗಗಳ ೨೪ ಸಮುದಾಯಗಳ ಮುಖಂಡರು ಒಟ್ಟಾಗಿ ಸೇರಿ ಸುದೀರ್ಘ ಸಭೆ ನಡೆಸಿ, ದ್ಯಾವಪ್ಪ ನಾಯಕ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದರು.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ರಾಜ್ಯಮಟ್ಟದ ನೂತನ ಅಹಿಂದ ಸಂಘಟನೆಯ ನೇತೃತ್ವ ವಹಿಸಲು ಆಕಾಂಕ್ಷಿಗಳು ಇದ್ದರೆ ಹೆಸರು ಸೂಚಿಸಿ ಎಂದು ಸಭೆಯಲ್ಲಿ ಕೋರಲಾಯಿತು. ಈ ವೇಳೆ ಯಾರೊಬ್ಬರೂ ಅಧ್ಯಕ್ಷರಾಗಲು ಮುಂದೆ ಬರದಿದ್ದ ಕಾರಣ, ಮೈಸೂರು ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಅವರು ದ್ಯಾವಪ್ಪನಾಯಕ ಅವರ ಹೆಸರನ್ನು ಸೂಚಿಸಿದರು. ಸವಿತಾ ಸಮಾಜದ ಮೈಸೂರು ಜಿಲ್ಲಾ ಅಧ್ಯಕ್ಷರಾದ ನಾಗೇಶ್ ಅವರು ದ್ಯಾವಪ್ಪನಾಯಕ ಅವರ ಹೆಸರನ್ನು ಅನುಮೋದಿಸಿದರು. ಬಳಿಕ ಸಭೆಯಲ್ಲಿ ಸೇರಿದ್ದ ಎಲ್ಲ ಸಮುದಾಯಗಳ ಮುಖಂಡರು ಚಪ್ಪಾಳೆ ಹೊಡೆಯುವ ಮೂಲಕ ದ್ಯಾವಪ್ಪ ನಾಯಕ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ನಾಗೇಶ್ ಅವರು ಮಾತನಾಡಿ, ಹಿರಿಯ ಹೋರಾಟಗಾರ ಮತ್ತು ಪ್ರಾಮಾಣಿಕ ವ್ಯಕ್ತಿತ್ವ ಹೊಂದಿರುವ ಜನಪರ ಮುಖಂಡರಾದ ದ್ಯಾವಪ್ಪ ನಾಯಕ ಅವರನ್ನು ಕರ್ನಾಟಕ ರಾಜ್ಯ ಅಹಿಂದ ಒಕ್ಕೂಟದ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮುಂದೆ ಇವರ ನೇತೃತ್ವದಲ್ಲಿ ಎಲ್ಲ ಸಮುದಾಯಗಳಿಗೆ ಆದ್ಯತೆ ನೀಡುವ ಮೂಲಕ ೨೫ ಜನರ ಸಮಿತಿ ರಚಿಸಲಾಗುವುದು. ಸಮಿತಿಯಲ್ಲಿ ಎಲ್ಲ ಕೋಮುಗಳಿಗೂ, ಮಹಿಳೆಯರಿಗೂ ಆದ್ಯತೆ ನೀಡಲಾಗುವುದು ಎಂದರು.
ಮೈಸೂರು ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಅವರು ಮಾತನಾಡಿ, ದ್ಯಾವಪ್ಪ ನಾಯಕ ಅವರು, ತಳ ಸಮುದಾಯದ ನೋವುಗಳನ್ನು ಬಲ್ಲವರಾಗಿದ್ದಾರೆ. ಈ ಸಮುದಾಯದ ಜನರಿಗೆ ಯಾವುದೇ ರೀತಿಯ ಸಂಕಷ್ಟಗಳು ಬಂದರೂ ಅದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕು. ತಳ ಸಮುದಾಯದ ಮಕ್ಕಳ ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ತಮ್ಮ ಸಮಯವನ್ನು ಮೀಸಲಿಟ್ಟು ಹೋರಾಟ ನಡೆಸಬೇಕು. ನಾವೆಲ್ಲರೂ ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ಮೈಸೂರು ಜಿಲ್ಲಾ ಮಡಿವಾಳ ಸಂಘದ ಗೌರವ ಅಧ್ಯಕ್ಷರಾದ ಬಿ.ಜಿ.ಕೇಶವ ಮಾತನಾಡಿ, ಸಾಂಸ್ಕೃತಿಕ ನಗರಿ ಮೈಸೂರು ನಗರವನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಒಂದು ರಾಜ್ಯಮಟ್ಟದ ಅಹಿಂದಾ ಸಂಘಟನೆ ಕಟ್ಟಬೇಕು ಎಂದು ನಾವು ಹಲವಾರು ದಿನಗಳಿಂದ ಚಿಂತನೆ ನಡೆಸಿದ್ದೆವು. ಈ ಸಂಘದ ನೇತೃತ್ವ ವಹಿಸಲು ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾಗ ನಮಗೆ ದ್ಯಾವಪ್ಪ ನಾಯಕ ಕಂಡು ಬಂದರು. ಈಗಾಗಲೇ ಹಲವು ಸಂಘಟನೆಗಳ ನೇತೃತ್ವವಹಿಸಿದ್ದ ಅವರು ಹಲವಾರು ಜನಪರ ಹೋರಾಟಗಳಲ್ಲಿಯೂ ಭಾಗವಹಿಸಿ ಜನರಿಗೆ ನ್ಯಾಯ ಕೊಡಿಸಿದ್ದ ಅನುಭವ ಇದ್ದ ಕಾರಣ ೨೪ ಸಮುದಾಯಗಳ ಮುಖಂಡರು ಇಂದು ಒಟ್ಟಾಗಿ ಸೇರಿ ಅವರನ್ನು ಆಯ್ಕೆ ಮಾಡಿದ್ದೇವೆ. ಯಾವುದೇ ಸಣ್ಣ ಪುಟ್ಟ ಲೋಪದೋಷಗಳು ಇಲ್ಲದಂತೆ ಅವರ ನೇತೃತ್ವದಲ್ಲಿ ನಾವು ಕಾರ್ಯನಿರ್ವಹಿಸಿ ಸಂಘಟನೆಯನ್ನು ಬಲವಾಗಿ ಕಟ್ಟುತ್ತೇವೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಸಮುದಾಯದ ಮುಖಂಡರಾದ ಎಸ್.ರಾಜೇಶ್, ಎಂ.ವಿ.ಶ್ರೀನಿವಾಸ ಮಿತ್ರ, ಆನಂದ್ ಸಿಂಗ್, ಸಂತೋಷ್ ಕಿರಾಳು, ಸುಂದರ ಡಿಸೋಜಾ, ಶ್ರೀಧರ್, ಸರಸ್ವತಿ, ಡಿ.ಎನ್.ಬಾಬು, ತೊಂಡಾಳು ಶಂಕರ್, ಎಸ್.ಮಂಜುನಾಥ್, ಎಸ್.ಮಹದೇವ, ಎನ್.ಕೃಷ್ಣ, ಕೆ.ನಾಗರಾಜು, ಹೆಚ್.ಜಿ.ರೇವಣ್ಣ, ಸುಶೀಲಮ್ಮ, ಲಕ್ಷ್ಮಿ, ಶ್ರೀರಾಮ್, ಪ್ರಕಾಶ್, ಆರ್.ಆರ್.ಪ್ರಕಾಶ್, ಎನ್.ಸಿ.ಉಮೇಶ್, ನಾಗರಾಜು ಮುಂತಾದವರು ಇದ್ದರು.














