ಮನೆ ಕಾನೂನು ಊಟಿ, ಕೊಡೈಕೆನಾಲ್ ಪ್ರವೇಶಿಸುವ ವಾಹನಗಳಿಗೆ ಪ್ರಾಯೋಗಿಕವಾಗಿ ಇ ಪಾಸ್ ವ್ಯವಸ್ಥೆ: ಮದ್ರಾಸ್ ಹೈಕೋರ್ಟ್ ಆದೇಶ

ಊಟಿ, ಕೊಡೈಕೆನಾಲ್ ಪ್ರವೇಶಿಸುವ ವಾಹನಗಳಿಗೆ ಪ್ರಾಯೋಗಿಕವಾಗಿ ಇ ಪಾಸ್ ವ್ಯವಸ್ಥೆ: ಮದ್ರಾಸ್ ಹೈಕೋರ್ಟ್ ಆದೇಶ

0

ಪ್ರಾಯೋಗಿಕವಾಗಿ ಮೇ 7ರಿಂದ ಜೂನ್ 30 ರವರೆಗೆ ಇ-ಪಾಸ್ ವ್ಯವಸ್ಥೆ ಜಾರಿಗೆ ತರುವ ಮೂಲಕ ಪ್ರವಾಸಿಗರು ನೀಲಗಿರಿ ಜಿಲ್ಲೆ ಮತ್ತು ಕೊಡೈಕೆನಾಲ್‌ ಪ್ರವೇಶಿಸುವುದನ್ನು ನಿಯಂತಿಸುವಂತೆ ಮದ್ರಾಸ್ ಹೈಕೋರ್ಟ್ ಸೋಮವಾರ ನೀಲಗಿರಿ ಮತ್ತು ದಿಂಡುಗಲ್ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ .

Join Our Whatsapp Group

ಗಿರಿಧಾಮಗಳ ರಸ್ತೆ ಸಾಗಾಟ ಸಾಮರ್ಥ್ಯ ಕುರಿತಂತೆ ಬೆಂಗಳೂರಿನ  ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂಬಿ) ಮತ್ತು ಚೆನ್ನೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿಎಂ) ಅಧ್ಯಯನ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಎನ್ ಸತೀಶ್ ಕುಮಾರ್ ಮತ್ತು ಡಿ ಭರತ ಚಕ್ರವರ್ತಿ ಅವರ ಪೀಠವು ಈ ಆದೇಶ ನೀಡಿದೆ.

ಗಿರಿಧಾಮಗಳಿಗೆ ಪ್ರವೇಶಿಸುವ ವಾಹನಗಳ ಸಂಖ್ಯೆಗೆ ಯಾವುದೇ ನಿರ್ಬಂಧವಿಲ್ಲ. ಅವು ಇ- ಪಾಸ್‌ ಮೂಲಕ ಗಿರಿಧಾಮಗಳನ್ನು ಪ್ರವೇಶಿಸಬಹುದು ಎಂದು ನ್ಯಾಯಾಲಯ ನುಡಿದಿದೆ. 

ನೀಲಗಿರಿ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ ರಸ್ತೆಗಳ ಸಾಗಾಟ ಸಾಮರ್ಥ್ಯ ಕುರಿತ ಅರ್ಜಿಗಳನ್ನು ಅದು ವಿಚಾರಣೆ ನಡೆಸಿತು. ನೀಲಗಿರಿ ಜಿಲ್ಲೆಯಲ್ಲಿ ಪ್ರಸಿದ್ಧ ಗಿರಿಧಾಮ ಊಟಿ ಇದ್ದರೆ ಕೊಡೈಕೆನಾಲ್ ದಿಂಡಿಗಲ್‌ ಜಿಲ್ಲೆಯಲ್ಲಿದೆ.

ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಸ್ಥಿತಿಗತಿ ವರದಿ ಪ್ರಕಾರ ಪ್ರತಿ ದಿನ 20,011 ವಾಹನಗಳು ನೀಲಗಿರಿ ಪ್ರವೇಶಿಸುತ್ತವೆ. ಇದರಲ್ಲಿ ಉಚ್ಛ್ರಾಯದ ಅವಧಿಯಲ್ಲಿ ಸರಾಸರಿ 11,509 ಕಾರುಗಳು, 1,341 ವ್ಯಾನ್‌ಗಳು, 637 ಬಸ್‌ಗಳು, 6,524 ದ್ವಿಚಕ್ರ ವಾಹನಗಳು ಸಂಚರಿಸುತ್ತವೆ.

ಈ ಪರಿಸ್ಥಿತಿಯು ಆತಂಕಕಾರಿಯಾಗಿದ್ದು ಸ್ಥಳೀಯ ನಿವಾಸಿಗಳ ದೈನಂದಿನ ಓಡಾಟಕ್ಕೆ ತಡೆ ಒಡ್ಡತ್ತದೆ. ಅಷ್ಟೇ ಅಲ್ಲದೆ ಪ್ರವಾಸಿಗರ ಅನುಭವಕ್ಕೂ ಧಕ್ಕೆ ಪರಿಸರಕ್ಕೂ ಮಾರಕ ಎಂದು ವರದಿ ಹೇಳಿತ್ತು.

ಹೀಗಾಗಿ ಅಧ್ಯಯನ ನಡೆಸುತ್ತಿರುವ ಸಂದರ್ಭದಲ್ಲಿ ಪ್ರಸಕ್ತ ವರ್ಷ ಗಿರಿಧಾಮ ಪ್ರವೇಶಿಸುವ ವಾಹನಗಳ ಸಂಖ್ಯೆಗೆ ಯಾವುದೇ ನಿರ್ಬಂಧ ವಿಧಿಸದೆ ಇ-ಪಾಸ್ ಮೂಲಕ ವಾಹನಗಳ ಪ್ರವೇಶವನ್ನು ನಿಯಂತ್ರಿಸಬಹುದು ಎಂದು ನ್ಯಾಯಾಲಯ ಸೂಚಿಸಿದೆ.

ವಾಹನದ ವಿಧ, ಭೇಟಿಯ ಉದ್ದೇಶ, ತಂಗುವ ಅವಧಿ, ಪ್ರಯಾಣಿಸುವ ಜನರ ಸಂಖ್ಯೆ ಇತ್ಯಾದಿಗಳ ಬಗ್ಗೆ ಪ್ರಶ್ನೆಗಳನ್ನು ಹೊಂದಿರುವ ಅರ್ಜಿ ಭರ್ತಿ ಮಾಡಿ ಪಾಸ್‌ ಪಡೆಯಬಹುದು. ಇ- ಪಾಸ್‌ ನೀಡುವ ಪೋರ್ಟಲ್‌ ಹಸಿರು ತೆರಿಗೆ ಇಲ್ಲವೇ ಸಂಭವನೀಯ ಟೋಲ್‌ ಶುಲ್ಕಗಳನ್ನು ಸಂಗ್ರಹಿಸಬಹುದು. ನೀಲಗಿರಿಯ ಜೀವ ವೈವಿಧ್ಯ ಮತ್ತು ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಈ ಆದೇಶವನ್ನು ನೀಡಲಾಗುತ್ತಿದೆ ಎಂದು ಪೀಠ ನುಡಿದಿದೆ.

ತೀವ್ರ ಬರ ಪರಿಸ್ಥಿತಿಯಿಂದಾಗಿ ಸ್ಥಳೀಯ ನಿವಾಸಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸುವುದು ಸವಾಲಾಗಿ ಪರಿಣಮಿಸಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಮೇ 7ರಿಂದ ಜೂನ್ 30ರವರೆಗೆ ಪ್ರಾಯೋಗಿಕವಾಗಿ ಇ-ಪಾಸ್ ವ್ಯವಸ್ಥೆ ಜಾರಿಗೆ ತರುವಂತೆ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.