ನವದೆಹಲಿ: ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಇಂದು(ಅ. 18) ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿರುವುದಾಗಿ ವರದಿಯಾಗಿದೆ. ಇಎಸ್‌ಐ ಆಸ್ಪತ್ರೆಯಲ್ಲಿ ಬೆಂಕಿ ನಂದಿಸಲು ಕನಿಷ್ಠ 10 ಅಗ್ನಿಶಾಮಕ ವಾಹನಗಳನ್ನು ಸೀಲ್ದಾಹ್ ಪ್ರದೇಶಕ್ಕೆ ಧಾವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಿನ ಜಾವ ಸುಮಾರು 5.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಆಸ್ಪತ್ರೆಯ ಐಸಿಯುನಲ್ಲಿ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ, ಅಲ್ಲದೆ ಆಸ್ಪತ್ರೆಯಲ್ಲಿದ್ದ ರೋಗಿಗಳು ಸೇರಿದಂತೆ ಸುಮಾರು 80 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ. ರೋಗಿಯ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಅಲ್ಲದೆ ರೋಗಿಯ ಮೈಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.
ಆಸ್ಪತ್ರೆಯ ಒಂದು ವಾರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅವಘಡವನ್ನು ತಪ್ಪಿಸಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ.
ಘಟನೆ ಕುರಿತು ಮಾಹಿತಿ ನೀಡಿದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಟಿಕೆ ದತ್ತಾ, ಇಎಸ್‌ಐ ಆಸ್ಪತ್ರೆಯ ವಾರ್ಡ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಸುಮಾರು 80 ರೋಗಿಗಳು ಒಳಗೆ ಸಿಲುಕಿಕೊಂಡರು. 20 ನಿಮಿಷಗಳಲ್ಲಿ, ನಾವು ಎಲ್ಲರನ್ನೂ ಯಶಸ್ವಿಯಾಗಿ ರಕ್ಷಿಸಿದ್ದೇವೆ. ಐಸಿಯುಗೆ ದಾಖಲಾದ ಓರ್ವ ರೋಗಿ ಸಾವನ್ನಪ್ಪಿದ್ದಾನೆ. ಉಳಿದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.