ಬಹುತೇಕ ಆಯಾಮಗಳಲ್ಲಿ ಈರುಳ್ಳಿ ಸೇವನೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಹಸಿಯಾದ ಸಣ್ಣ ತುಂಡು ಈರುಳ್ಳಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾನೇ ಲಾಭವಿದೆ. ಪ್ರಮುಖವಾಗಿ ಹಸಿ ಈರುಳ್ಳಿಯನ್ನು ಸ್ವಲ್ಪ ಬೆಲ್ಲದ ಜೊತೆಗೆ ಸೇವನೆ ಮಾಡಿದರೆ, ರಕ್ತದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಆಗಿ, ಹೃದಯದ ಆರೋಗ್ಯ ಅಚ್ಚುಕಟ್ಟಾಗಿ ಕೆಲಸಮಾಡುತ್ತದೆ.
ಈರುಳ್ಳಿಯನ್ನು ಕತ್ತರಿಸುವಾಗ, ಕಣ್ಣಲ್ಲಿ ನೀರು ಬಂದರೂ ಕೂಡ, ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ತಂದುಕೊಡುತ್ತದೆ.
ಪ್ರಮುಖವಾಗಿ ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು, ಆಂಟಿ ಇನ್ಫಾಮೇಟರಿ ಗುಣ ಲಕ್ಷಣಗಳು ಅಧಿಕ ಪ್ರಮಾಣ ದಲ್ಲಿ ಸಿಗುವುದರ ಜೊತೆಗೆ, ವಿಟಮಿನ್ ಸಿ, ಸಲ್ಫರ್, ಫ್ಲೇವ ನಾಯ್ಡ್‌ಗಳು ಯಥೇಚ್ಛವಾಗಿ ಸಿಗುತ್ತದೆ.
ಇನ್ನು ಈರುಳ್ಳಿಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿ ಅಂಶ ಗಳು ಕಂಡು ಬರುವುದರಿಂದ, ದೇಹದ ತೂಕ ಕಡಿಮೆ ಮಾಡಲು, ನೆರವಾಗುತ್ತದೆ.
ಅಷ್ಟೇ ಅಲ್ಲದೆ ಇದರಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡ ನೆರವಾ ಗುತ್ತದೆ.
ಇವೆಲ್ಲಾದರ ಜೊತೆಗೆ ಆಸ್ತಮಾ ರೋಗಿಗಳಲ್ಲಿ ಕಂಡು ಬರುವ ಉಸಿರಾಟದ ತೊಂದರೆಯ ಸಮಸ್ಯೆಯನ್ನು ದೂರ ಮಾಡಿ, ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣ ಮಾಡಲು ಕೂಡ ಸಹಾಯ ಮಾಡುತ್ತದೆ.
ಮೊದಲೇ ಹೇಳಿದ ಹಾಗೆ ಈರುಳ್ಳಿ ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶವನ್ನು ಒಳಗೊಂಡಿರುವ ಜೊತೆಗೆ, ಪ್ರಬಲ ಪಾಲಿಫಿನಲ್ ಎಂಬ ಸಂಯುಕ್ತ ಅಂಶ ಕೂಡ, ಈ ತರಕಾರಿಯಲ್ಲಿ ಕಂಡು ಬರುವುದರಿಂದ, ಇವು ಆಂಟಿ ಆಕ್ಸಿಡೆಂಟ್ ರೂಪದಲ್ಲಿ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡಿ, ನಮ್ಮ ದೇಹಕ್ಕೆ ರಕ್ಷಣೆ ನೀಡುತ್ತದೆ ಹಾಗೂ ದೇಹದ ರೋಗ ನಿರೋಧಕ ಶಕ್ತಿ ಯನ್ನು ಹೆಚ್ಚು ಮಾಡುತ್ತದೆ.
ನಾರಿನಾಂಶ ಅಪಾರ ಪ್ರಮಾಣದಲ್ಲಿ ಈರುಳ್ಳಿಯಲ್ಲಿ ಕಂಡು ಬರುವುದರಿಂದ, ನಮ್ಮ ದೈನಂದಿನ ಅಡುಗೆ ಯಲ್ಲಿ, ಈ ತರಕಾರಿಯನ್ನು ಬಳಸಿ ಸೇವನೆ ಮಾಡುವು ದರಿಂದ, ಹೊಟ್ಟೆಗೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ಸರಿಪಡಿಸುತ್ತದೆ.
ಪ್ರಮುಖವಾಗಿ ಅಜೀರ್ಣತೆ, ಮಲಬದ್ಧತೆಯಂತಹ ಸಮಸ್ಯೆ ಬಹಳ ಬಹಳ ಬೇಗನೇ ನಿವಾರಣೆ ಆಗುತ್ತದೆ ಎಂದು ಪೌಷ್ಟಿಕಾಂಶ ತಜ್ಞರಾದ ಲವ್ನೀತ್ ಬಾತ್ರಾ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ತಿಳಿಸಿದ್ದಾರೆ.
ಈರುಳ್ಳಿಯಲ್ಲಿ ಕಂಡುಬರುವ ಸಲ್ಫರ್ ಹಾಗು ಕ್ರೋಮಿ ಯಂ ಅಂಶವು, ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಪ್ರಮುಖವಾಗಿ ಈರುಳ್ಳಿ ಕಡಿಮೆ ಪ್ರಮಾಣದಲ್ಲಿ ಗ್ಲೈಸೆ ಮಿಕ್ ಇಂಡೆಕ್ಸ್ ಅನ್ನು ಹೊಂದಿರುವುದರಿಂದ, ರಕ್ತ ದಲ್ಲಿನ ಸಕ್ಕರೆ ಪ್ರಮಾಣವನ್ನು ಸರಿಯಾಗಿ ನಿರ್ವಹಣೆ ಮಾಡಿ ಮಧುಮೇಹ ಸಮಸ್ಯೆ ಇರುವವರಿಗೆ ಹಾಗೂ ಈ ಕಾಯಿಲೆಯ ರೋಗ ಲಕ್ಷಣ ಗಳು ಕಾಣಿಸಿಕೊಂಡ ಜನರಿಗೆ ಅನುಕೂಲಕರವಾಗಿ ಕೆಲಸ ಮಾಡುತ್ತದೆ.
ನಿಮಗೆ ಗೊತ್ತಿರಲಿ, ಈರುಳ್ಳಿಯಲ್ಲಿ ದೇಹದ ಅಗತ್ಯಕ್ಕೆ ಬೇಕಾಗುವ ಕ್ಯಾಲ್ಸಿಯಂ ಅಂಶದ ಪ್ರಮಾಣ ಯಥೇಚ್ಛವಾಗಿ ಕಂಡು ಬರುತ್ತದೆ. ಹೀಗಾಗಿ ದೈನಂದಿನ ಅಡುಗೆಯಲ್ಲಿ ಮಿತವಾಗಿ ಈರುಳ್ಳಿ ಬಳಸುವುದರಿಂದ, ಮೂಳೆಗಳ ಹಾಗೂ ಹಲ್ಲುಗಳ ಬಲವರ್ಧನೆಗೆ ಹೆಚ್ಚು ಸಹಾಯಕವಾಗಲಿದೆ.
ಅಧ್ಯಯನದಲ್ಲಿ ಹೇಳಿರುವ ಹಾಗೆ ಈರುಳ್ಳಿಯನ್ನು ಬೇಯಿಸಿ ತಿನ್ನುವ ಬದಲು ಅಥವಾ ಎಣ್ಣೆಯಲ್ಲಿ ಹುರಿದಿ ರುವ ಈರುಳ್ಳಿಯನ್ನು ಸೇವನೆ ಮಾಡುವ ಬದಲು, ಹಸಿ ಯಾಗಿ ಒಂದೆರಡು ಪೀಸ್ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.
ಇಲ್ಲಾಂದ್ರೆ ಒಂದು ಕಪ್ ಮೊಸರಿನ ಜೊತೆ ಈರುಳ್ಳಿ ಯನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ರಕ್ತದೊತ್ತಡದ ಸಮಸ್ಯೆ ನಿಯಂತ್ರಣಕ್ಕೆ ಬಂದು, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾ ಗುತ್ತದೆ.
ಈರುಳ್ಳಿ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಕೊಬ್ಬಿನ ಅಂಶವನ್ನು ದೂರಮಾಡಿ, ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಂಡು, ಹೃದಯಕ್ಕೆ ಹೆಚ್ಚಿನ ಒತ್ತಡ ಬೀಳದಂತೆ ನೋಡಿಕೊಳ್ಳುತ್ತದೆ.
ಹೀಗಾಗಿ ದಿನಾ ಸಣ್ಣ ತುಂಡು ಬೆಲ್ಲದ ಜೊತೆಗೆ, ಸಣ್ಣ ಪೀಸ್ ಈರುಳ್ಳಿಯನ್ನು ಕೂಡ ತಿನ್ನುವುದರಿಂದ, ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.