ಬೆಂಗಳೂರು: ತ್ವಚೆಯ ಸಂರಕ್ಷಣೆಗೂ, ಆಹಾರಕ್ಕೂ ಬಹಳ ನಂಟಿದೆ. ಪ್ರತಿಯೊಬ್ಬರು ನಿರ್ದಿಷ್ಟ ಪ್ರಮಾಣದ ಆಹಾರ ಮಾತ್ರ ಸೇವಿಸಬೇಕು. ಒಂದು ಪಕ್ಷ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಿದರೂ ನಮ್ಮ ಶರೀರದ ಬಲ, ಕಾಂತಿ ಕುಗ್ಗಿ ದೇಹದ ಬೆಳವಣಿಗೆ ಕುಂಠಿತಗೊಳ್ಳುತ್ತದೆ.
ಸಾಮಾನ್ಯವಾಗಿ ಜನರು ಸಿಹಿ, ಹುಳಿ, ಉಪ್ಪು, ಖಾರ ಯಾವುದಾದರೂ ಒಂದನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಆರೂ ರುಚಿಗಳನ್ನೊಳಗೊಂಡ ಆಹಾರ ಇಷ್ಟಪಡುವುದು ವಿರಳ. ಆರು ರುಚಿಗಳಲ್ಲಿ ‘ಸಿಹಿ’ ಸೌಂದರ್ಯವರ್ಧನೆಯನ್ನುಂಟು ಮಾಡುತ್ತದೆ.
ಸಿಹಿ ಪೃಥ್ವಿ ಮತ್ತು ಆಪ್ ಮಹಾ ಭೂತಗಳ ಸಂಯೋಗದಿಂದ ಉಂಟಾಗುತ್ತದೆ. ಇದು ದೇಹದ ಬಲ, ಮೈಕಾಂತಿ, ಆರೋಗ್ಯಕರ ಚರ್ಮ ಹೊಂದುವುದಕ್ಕೆ ಮತ್ತು ಕೂದಲಿಗೆ ಪೋಷಣೆಯನ್ನುಂಟುಮಾಡುತ್ತದೆ.
ಆಹಾರದಲ್ಲಿ ಉಪ್ಪಿಲ್ಲದಿದ್ದರೆ ರುಚಿಯೇ ಇಲ್ಲ. ಆದರೆ ಇದು ಅತಿಯಾದರೆ ಸೌಂದರ್ಯವನ್ನು ತಗ್ಗಿಸುತ್ತದೆ. ಸುಕ್ಕು, ಬಿಳಿಗೂದಲು, ಇತರೆ ಚರ್ಮರೋಗಗಳು ಉಂಟಾಗುತ್ತವೆ. ಜಂಕ್ ಫುಡ್ ಗಳು ತಿನ್ನಲು ಹಿತವೆನಿಸಿದರೂ ಚರ್ಮದ ಆರೋಗ್ಯಕ್ಕೆ ಒಳ್ಳೆಯದಲ್ಲ.














