ಮನೆ ರಾಷ್ಟ್ರೀಯ ಆರ್ಥಿಕ ತಜ್ಞ ಮನಮೋಹನ್​ ಸಿಂಗ್ ಅಸ್ತಂಗತ; ಪ್ರಧಾನಿ ಮೋದಿ, ಖರ್ಗೆ ಸೇರಿ ಗಣ್ಯರಿಂದ ಕಂಬನಿ

ಆರ್ಥಿಕ ತಜ್ಞ ಮನಮೋಹನ್​ ಸಿಂಗ್ ಅಸ್ತಂಗತ; ಪ್ರಧಾನಿ ಮೋದಿ, ಖರ್ಗೆ ಸೇರಿ ಗಣ್ಯರಿಂದ ಕಂಬನಿ

0

ನವದೆಹಲಿ: ದೇಶದ ಮಾಜಿ ಪ್ರಧಾನಮಂತ್ರಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರು ವಿಧಿವಶರಾಗಿದ್ದಾರೆ. ಗುರುವಾರ ರಾತ್ರಿ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್​​) ದಾಖಲಿಸಲಾಗಿತ್ತು. 92 ವರ್ಷದ ಮಾಜಿ ಪ್ರಧಾನಿಯನ್ನು ರಾತ್ರಿ 8 ಗಂಟೆ ಸುಮಾರಿಗೆ ಆಸ್ಪತ್ರೆಯ ತುರ್ತು ನಿಗಾ ವಿಭಾಗದಲ್ಲಿ ದಾಖಲಿಸಲಾಗಿತ್ತು.

Join Our Whatsapp Group

ಡಾ. ಸಿಂಗ್​ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಅವರನ್ನು ಗುರುವಾರ ಸಂಜೆ ಏಮ್ಸ್​​ಗೆ ಕರೆತರಾಗಿತ್ತು. ಬಳಿಕ ಅವರನ್ನು ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಅವರು ವಿಧಿವಶರಾಗಿದ್ದಾರೆ ಎಂದು ಏಮ್ಸ್​ ವೈದ್ಯರು ತಿಳಿಸಿದ್ದಾರೆ. ​​

ಮನಮೋಹನ್ ಸಿಂಗ್ ಅವರು 1991- 96ರ ಅವಧಿಯಲ್ಲಿ ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್ ಅವರ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿ ಮೆಚ್ಚುಗೆ ಗಳಿಸಿದ್ದರು. ದೇಶದ ಆರ್ಥಿಕತೆಯಲ್ಲಿ ವ್ಯಾಪಕ ಸುಧಾರಣೆಗಳನ್ನು ತಂದಿದ್ದರು.

ಕಾಂಗ್ರೆಸ್​ ನೇತೃತ್ವದಲ್ಲಿ 2004 ರಿಂದ 2014ರ ವರೆಗಿನ ಯುಪಿಎ ಸರ್ಕಾರದ ಎರಡು ಅವಧಿಯಲ್ಲಿ ಪ್ರಧಾನಿಯಾಗಿದ್ದರು. ಬಳಿಕ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು, ಈ ವರ್ಷದ ಏಪ್ರಿಲ್​​ನಲ್ಲಿ ರಾಜಕೀಯದಿಂದ ನಿವೃತ್ತ ಪಡೆದಿದ್ದರು.

ಪ್ರಧಾನಿ ಮೋದಿ ಕಂಬನಿ: ಆರ್ಥಿಕ ತಜ್ಞನ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕಂಬನಿ ಮಿಡಿದಿದ್ದಾರೆ. ಭಾರತ ಅತ್ಯಂತ ಗೌರವಾನ್ವಿತ ನಾಯಕರಲ್ಲಿ ಒಬ್ಬರಾದ ಡಾ. ಮನಮೋಹನ್ ಸಿಂಗ್ ಜಿ ಅವರನ್ನು ಕಳೆದುಕೊಂಡಿದೆ. ವಿನಮ್ರತೆಯ ಹಾದಿಯಿಂದ ಅವರು ಗೌರವಾನ್ವಿತ ಅರ್ಥಶಾಸ್ತ್ರಜ್ಞರಾದರು. ಹಣಕಾಸು ಸಚಿವರಾಗಿ ಅಲ್ಲದೆ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ದೇಶದ ಪ್ರಧಾನಿಯಾಗಿ ಅವರು ಜನರ ಜೀವನವನ್ನು ಸುಧಾರಿಸಲು ವ್ಯಾಪಕ ಪ್ರಯತ್ನಗಳನ್ನು ಮಾಡಿದರು ಎಂದು ಹೇಳಿದ್ದಾರೆ.

ಸಿಂಗ್​ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿರುವ ಮೋದಿ, ಡಾ. ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಮತ್ತು ನಾನು ಗುಜರಾತ್ ಸಿಎಂ ಆಗಿದ್ದಾಗ ಆಡಳಿತದ ಕುರಿತು ಸಂವಹನ ನಡೆಸುತ್ತಿದ್ದೆವು. ಸರ್ಕಾರದ ವಿವಿಧ ವಿಷಯಗಳ ಕುರಿತು ವ್ಯಾಪಕ ಚರ್ಚೆಗಳನ್ನು ನಡೆಸಿದ್ದೇವೆ. ಅವರ ಬುದ್ಧಿವಂತಿಕೆ ಮತ್ತು ನಮ್ರತೆ ಯಾವಾಗಲೂ ಗೋಚರಿಸುತ್ತದೆ ಎಂದು ಸ್ಮರಿಸಿದ್ದಾರೆ.

ಶುಕ್ರವಾರ ಕಾಂಗ್ರೆಸ್​ ನ ಎಲ್ಲ ಕಾರ್ಯಕ್ರಮ ರದ್ದು: ಕರ್ನಾಟಕದ ಬೆಳಗಾವಿಯಲ್ಲಿ ನಡೆಯಬೇಕಿದ್ದ ರ್ಯಾಲಿ ಸೇರಿದಂತೆ ನಾಳೆ ನಡೆಯಬೇಕಿದ್ದ ಕಾಂಗ್ರೆಸ್​ ಪಕ್ಷದ ಎಲ್ಲಾ ಚಟುವಟಿಕೆಗಳನ್ನು ರದ್ದುಗೊಳಿಸಲಾಗಿದೆ.

ಮಾತಿಗಿಂತ ಕ್ರಿಯಾಶೀಲ ವ್ಯಕ್ತಿ. ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಅಪಾರ ಕೊಡುಗೆಯಿಂದಾಗಿ ಮನಮೋಹನ್​ ಸಿಂಗ್​ ಅವರು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್​ನಿಂದ ಹಿಡಿದು ದೇಶದ ಹಣಕಾಸು ಸಚಿವರಾಗಿ, ಪ್ರಧಾನಿಯಾಗಿ ಡಾ. ಸಿಂಗ್​ ಅವರದ್ದು ದೊಡ್ಡ ಹಾದಿ ಎಂದು ಹೇಳಿದ್ದಾರೆ.