ಭುವನೇಶ್ವರ (ಓಡಿಶಾ): ಬರೋಬ್ಬರಿ 10 ರಾಜ್ಯಗಳಲ್ಲಿ 27 ಮಹಿಳೆಯರನ್ನು ಮದುವೆಯಾಗಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ವ್ಯಕ್ತಿಯನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಓಡಿಶಾದ ರಮೇಶ್ ಸ್ವೇನ್ ಎಂಬಾತ ಬಂಧಿತ ಆರೋಪಿ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷವಷ್ಟೇ ರಮೇಶ್ ನನ್ನು ಓಡಿಶಾ ಪೊಲೀಸರು ಬಂಧಿಸಿದ್ದರು. ಈಗ ಮಹಾವಂಚಕನ ವಿರುದ್ಧ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.
ರಮೇಶ್ ಸ್ವೇನ್ ಬಿಭು ಪ್ರಕಾಶ್ ಸ್ವೇನ್ ಎಂದು ಕೂಡ ಗುರುತಿಸಿಕೊಂಡಿದ್ದು, 2011ರಲ್ಲಿಯೇ ಈತನ ಬಂಧನವಾಗಿತ್ತು. ಹೈದರಾಬಾದ್ನಲ್ಲಿ ಎಂಬಿಬಿಎಸ್ ಸೀಟು ಕೊಡಿಸುತ್ತೇನೆ ಎಂದು 2 ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ವಸೂಲಿ ಮಾಡಿದ್ದ ಆರೋಪದಲ್ಲಿ ರಮೇಶ್ ಸ್ವೇನ್ 2011ರಲ್ಲಿ ಬಂಧನವಾಗಿದ್ದ.
ಅದಲ್ಲದೇ 2006ರಲ್ಲಿ ಕೇರಳದ 13 ಬ್ಯಾಂಕ್ಗಳಲ್ಲಿ 128 ನಕಲಿ ಕ್ರೆಡಿಟ್ ಕಾರ್ಡ್ ಗಳ ಮೂಲಕ 1 ಕೋಟಿ ರೂ.ಗೂ ಹೆಚ್ಚು ಹಣವನ್ನು ತೆಗೆದುಕೊಂಡು ಬ್ಯಾಂಕ್ ಗಳಿಗೆ ವಂಚಿಸಿದ್ದ. ಈ ಪ್ರಕರಣದಲ್ಲಿ ಕೂಡ ರಮೇಶ್ ಸ್ವೇನ್ ಅನ್ನು ಬಂಧಿಸಲಾಗಿತ್ತು. ಇನ್ನೂ ಓಡಿಶಾದಲ್ಲಿ ದಾಖಲೆಯಾದ ಪ್ರಕರಣದಲ್ಲಿ ಪೊಲೀಸರು ಸ್ವೇನ್ ನ ಪತ್ನಿಯರಲ್ಲಿ ಒಬ್ಬಳಾದ ಡಾ ಕಮಲಾ ಸೇಠಿ, ಆಕೆಯ ಸಹೋದರಿ ಮತ್ತು ಚಾಲಕನನ್ನು ಬಂಧಿಸಿದ್ದರು. ಬಳಿಕ ಓಡಿಶಾ ಹೈಕೋರ್ಟ್ ನಿಂದ ಜಾಮೀನು ಪಡೆದಿದ್ದರು.
ಆರೋಪಿಯ ವಿರುದ್ಧ ಸಾಕ್ಷಿಗಳನ್ನು, ದಾಖಲೆಗಳನ್ನು ಸಂಗ್ರಹಿಸಲು ಜಾರಿ ನಿರ್ದೇಶನಾಲಯ ಓಡಿಶಾ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿತ್ತು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.
ಮೇ 2021ರಲ್ಲಿ ಆತನ 27 ಪತ್ನಿಯರ ಪೈಕಿ ದಿಲ್ಲಿ ಮೂಲದ ಒಬ್ಬರು ನೀಡಿದ ದೂರಿನಂತೆ ರಮೇಶ್ ನನ್ನು ಬಂಧಿಸಲಾಗಿದೆ. ರಮೇಶ್ನನ್ನು 2018ರಲ್ಲಿ ಮ್ಯಾಟ್ರಿಮೋನಿ ಸೈಟ್ ನಲ್ಲಿ ಭೇಟಿಯಾಗಿ, ಬಳಿಕ ಮದುವೆಯಾಗಿದ್ದೆ. ರಮೇಶ್ ಆರೋಗ್ಯ ಸಚಿವಾಲಯದಲ್ಲಿ ಉನ್ನತ ಅಧಿಕಾರಿ ಎಂದು ಹೇಳಿ ನನ್ನನ್ನು ಮದುವೆಯಾಗಿ ವಂಚಿಸಿದ್ದ ಎಂದು ದೂರು ನೀಡಿದ್ದರು.
ಸ್ವೇನ್ ಭುವನೇಶ್ವರದಲ್ಲಿ ಮೂರು ಅಪಾರ್ಟ್ಮೆಂಟ್ ಗಳನ್ನು ಬಾಡಿಗೆಗೆ ಪಡೆದಿದ್ದು, ಏಕಕಾಲಕ್ಕೆ ಮೂವರು ಹೆಂಡತಿಯರನ್ನು ಅವುಗಳಲ್ಲಿ ಇರಿಸಿದ್ದ ಎಂದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ. ಮದುವೆಯಾದ ಬಳಿಕ ಅವರಿಂದ ಹಣ ಪಡೆಯುವ ಸ್ವೇನ್ ಅವರನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಲು ಹುಡುಕುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಸ್ವೇನ್ ಐಟಿಬಿಪಿ ಸಹಾಯಕ ಕಮಾಂಡೆಂಟ್, ಅಸ್ಸಾಂನಲ್ಲಿ ವೈದ್ಯ, ಛತ್ತೀಸ್ ಗಢದಲ್ಲಿ ಚಾರ್ಟರ್ಡ್ ಅಕೌಂಟೆಂಟ್, ಕೇರಳದ ಸರ್ಕಾರಿ ಅಧಿಕಾರಿ, ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ನ ವಕೀಲರಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಮಹಿಳೆಯರನ್ನು ವಂಚಿಸಿದ್ದಾನೆ.