ವಿಜಯಪುರ: ಶಾಸಕ ನಾಗೇಂದ್ರ ಅವರನ್ನು ಇ.ಡಿ ವಿಚಾರಣೆ ಮಾಡಲು ಆಕ್ಷೇಪವಿಲ್ಲ. ನಿಷ್ಪಕ್ಷಪಾತ ತನಿಖೆ ಮಾಡಿದರೆ ಯಾವ ತಪ್ಪೂ ಇಲ್ಲ. ಆದರೆ ರಾಜಕೀಯ ಒತ್ತಡದಿಂದ ತನಿಖೆ ಆಗಬಾರದು, ಯಾರೇ ತಪ್ಪು ಮಾಡಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಿಯೇ ಆಗುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿ ಎಸ್.ಐ.ಟಿ ಈಗಾಗಲೇ ತನಿಖೆ ಆರಂಭಿಸಿದೆ. ನಾಗೇಂದ್ರ ಅವರ ಪಾತ್ರ ಇದೆಯೋ ಇಲ್ಲವೋ ಎನ್ನುವುದು ನಿಷ್ಪಕ್ಷಪಾತ ತನಿಖೆ ಆಗಬೇಕು. ಇದರಲ್ಲಿ ರಾಜಕೀಯ ಬೆರೆಸಬಾರದು ಎಂದರು.
ಬೇರೆ ರಾಜ್ಯಗಳಲ್ಲಿಯೂ ಹಣ ಸಂದಾಯವಾದ ಕಾರಣ ಇಡಿ ತನಿಖೆ ನಡೆಸುತ್ತಿದೆ. ಎಸ್ಐಟಿ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಅವರು ಕೂಡ ತನಿಖೆ ಮಾಡುತ್ತಿದ್ದಾರೆ. ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆಯಾಗಲಿ, ಆದರೆ ನಿರಪರಾಧಿ ಆಗಿದ್ದರೆ ಅವರ ವಿರುದ್ಧ ಯಾವುದೆ ಸಾಕ್ಷಿ ಇಲ್ಲದಿದ್ದರೆ ಷಡ್ಯಂತರದಿಂದ ಇಡಿ ಬಳಸಿಕೊಂಡು ರಾಜಕೀಯದ ಕಾರಣಕ್ಕೆ ಅಧಿಕಾರ ದುರಪಯೋಗ ಆಗುವಂತಹ ಕೆಲಸ ಆಗಬಾರದು ಎಂದರು.
ಮೂಡಾ ನಿವೇಶನ ಹಂಚಿಕೆ ವಿಷಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ಕಾನೂನು ಜಾರಿಯಾಗಿದೆ. ಅದರಂತೆ ಮಾಡಲಾಗಿದೆ ಎಂದು ಸ್ವಯಂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಮಜಾಯಿಷಿ ನೀಡಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಕಾಂಗ್ರೆಸ್ ಪಕ್ಷದವರೇ ಹಗರಣ ಹೊರ ಹಾಕಿದ್ದಾರೆಂದು ಹೇಳುವುದು ಸುಮ್ಮನೆ ಬೆಂಕಿ ಹಚ್ಚುವ ಕೆಲಸ ಎಂದು ಹರಿಹಾಯ್ದರು.