ಬೆಳಗಾವಿ(Belagavi): ಇಡಿ ಅಂದರೆ ಬಿಜೆಪಿ ಎಲೆಕ್ಷನ್ ಡಿಪಾರ್ಟ್ಮೆಂಟ್, ಐಟಿ ಅಂದರೆ ಇಂಟಲಿಜೆನ್ಸ್ ಡಿಪಾರ್ಟ್ಮೆಂಟ್ ಹಾಗೂ ಸಿಬಿಐ ಬಿಜೆಪಿ ಮುಂಚೂಣಿ ಘಟಕವಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿ ಪ್ರಸಾದ್ ಕಿಡಿಕಾರಿದ್ದಾರೆ.
ಸುವರ್ಣ ಸೌಧದಲ್ಲಿ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲೆ ಸಿಬಿಐ ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಐಟಿ ಅಂದರೆ ಅವರ ಇಂಟಲಿಜೆಂಟ್ ಡಿಪಾರ್ಟ್ಮೆಂಟ್ ಆಗಿ ಚಿಲುಮೆ ರೀತಿ ಕೆಲಸ ಮಾಡುತ್ತಿದೆ. ಸಿಬಿಐ ಕೂಡಾ ಬಿಜೆಪಿ ವಿರೋಧಿಗಳ ವಿರುದ್ಧ ದೊಡ್ಡ ಅಸ್ತ್ರ ಇಟ್ಟುಕೊಂಡು ಬಾಯಿ ಬಿಡಿಸಲು ಪ್ರಯತ್ನ ಮಾಡುತ್ತಿದೆ. ಆದರೆ ನಾವು ಭಯ ಪಡಲ್ಲ ಎಂದರು.
ರಮೇಶ್ ಜಾರಕಿಹೊಳಿ ಹಾಗೂ ಈಶ್ವರಪ್ಪ ಸದನಕ್ಕೆ ಗೈರು ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಿಜೆಪಿಯ ಆಂತರಿಕ ವಿಚಾರವಾಗಿದೆ. ರಮೇಶ್ ಹಾಗೂ ಈಶ್ವರಪ್ಪ ಮಾತ್ರವಲ್ಲ, ಇತರರೂ ಸರ್ಕಾರಕ್ಕೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಹೇಳಿದರು.
ನಾವು ಜನಸಾಮಾನ್ಯರ ವಿವಿಯವರು: ಸಾವರ್ಕರ್ ಫೋಟೋ ವಿವಾದದ ವಿಚಾರವಾಗಿ ಕಾಂಗ್ರೆಸ್ ಮುಖಂಡರ ನಡುವಿನ ಗೊಂದಲ ಕುರಿತಾಗಿ ಮಾತನಾಡಿ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಹುಳಿ ಹಿಂಡುವ ಕೆಲಸ ಆಗಬಾರದು. ಸರ್ಕಾರ ತೀರ್ಮಾನ ಕೈಗೊಂಡಾಗ ನಾವು ಕತ್ತಿನ ಪಟ್ಟಿ ಹಿಡಿಯಲು ಆಗಲ್ಲ. ನಾವು ನಾಗಪುರ ಯುನಿವರ್ಸಿಟಿಯವರಲ್ಲ. ನಾವು ಜನಸಾಮಾನ್ಯರ ವಿವಿಯವರು ಎಂದರು.
ಗಡಿ ವಿವಾದ ಇರುವಾಗ ಆ ಪ್ರದೇಶದ ಹಾಗೂ ಸ್ವಾತಂತ್ರ್ಯ ಹೋರಾಟದ ವಿರುದ್ಧ ಇದ್ದ ವ್ಯಕ್ತಿಯ ಫೋಟೋ ಹಾಕಿರುವುದು ನೋಡಿದಾಗ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಬಿಜೆಪಿಗೆ ಪ್ರಜಾಪ್ರಭುತ್ವ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ನಮ್ಮಲ್ಲಿ ದ್ವಂದ್ವ ಇಲ್ಲ, ನಾವು ಹಾವಿನ ಪುರ ವಿವಿಯಿಂದ ತೀರ್ಮಾನ ಮಾಡಲ್ಲ. ಸಾವರ್ಕರ್ ವಿಚಾರವಾಗಿ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬೇರೆ ಬೇರೆ ರೀತಿಯಲ್ಲಿ ವಿರೋಧ ಮಾಡುತ್ತಾರೆ. ನಮ್ಮಲ್ಲಿ ಮತ ಭೇಧ ಇರುತ್ತೆ ಇರಬೇಕು ಎಂದರು.