ಮನೆ ರಾಷ್ಟ್ರೀಯ ಆಪ್ ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ

ಆಪ್ ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ

0

ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ಮಾಜಿ ಸಚಿವ ಹಾಗೂ ಹಿರಿಯ ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಅವರಿಗೆ ಸೇರಿದ 12ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಜಿಎನ್‌ಸಿಟಿಡಿ ಆರೋಗ್ಯ ಯೋಜನೆಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಸೌರಭ್ ಭಾರದ್ವಾಜ್ ಭಾಗಿಯಾಗಿದ್ದಾರೆ ಎಂದು ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಆರೋಪಿಸಿದ್ದರು. ಈ ಸಂಬಂಧ ಮಂಗಳವಾರ ಇಡಿ ಅಧಿಕಾರಿಗಳು ಸೌರಭ್ ಭಾರದ್ವಾಜ್ ಅವರಿಗೆ ಸೇರಿದ 12ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ.

ದಾಳಿ ವೇಳೆ ವಶಪಡಿಸಿಕೊಂಡ ಆಸ್ತಿಗಳ ವಿವರ ಮತ್ತು ಪತ್ತೆಯಾದ ಆರ್ಥಿಕ ಅಕ್ರಮಗಳ ವಿವರಗಳನ್ನು ಕೇಂದ್ರ ತನಿಖಾ ಸಂಸ್ಥೆ ಇನ್ನೂ ಬಹಿರಂಗಪಡಿಸಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.

ಗ್ರೇಟರ್ ಕೈಲಾಶ್‌ನಿಂದ ಮೂರು ಬಾರಿ ಶಾಸಕರಾಗಿರುವ ಭಾರದ್ವಾಜ್, ದೆಹಲಿಯ ಆರೋಗ್ಯ, ನಗರಾಭಿವೃದ್ಧಿ ಮತ್ತು ಜಲ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ದೆಹಲಿ ಜಲ ಮಂಡಳಿಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಇಡಿ ದಾಳಿ ಬೆನ್ನಲ್ಲೇ ಎಎಪಿ ನಾಯಕಿ, ಮಾಜಿ ಸಿಎಂ ಆತಿಶಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಇದು ಪ್ರಧಾನಿ ಮೋದಿ ಅವರ ಪದವಿ ವಿಚಾರದ ಕುರಿತ ವಿಷಯವನ್ನು ಬೇರೆಡೆ ಸೆಳೆಯುವ ಪ್ರಯತ್ನ ಎಂದು ಕಿಡಿಕಾರಿದ್ದಾರೆ.