ತುಮಕೂರು: ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಮೇಲೆ ಬುಧವಾರ ಬೆಳಿಗ್ಗೆ ಇಡಿ ದಾಳಿ ನಡೆದಿದೆ. ಈ ದಾಳಿಗಳು ಮತ್ತು ಹೊರವಲಯಗಳಲ್ಲಿ ಇರುವ ವಿವಿಧ ಕಾಲೇಜುಗಳ ಮೇಲೆ ನಡೆದಿದ್ದು, ಸುಮಾರು ₹140 ಕೋಟಿ ವ್ಯವಹಾರದ ಕುರಿತು ಪರಿಶೀಲನೆ ನಡೆಯುತ್ತಿದೆ.
ಈ ನಡುವೆ ಪರಮೇಶ್ವರ್ ಕ್ರಯ ಮಾಡಿದ್ದ ಎಚ್.ಎಮ್.ಎಸ್ ಕಾಲೇಜಿನ ಕ್ರಯಪತ್ರವನ್ನು ವಶಕ್ಕೆ ಪಡಿಸಿಕೊಂಡಿರುವ ಇಡಿ ಅಧಿಕಾರಿಗಳು, ಶೋಧಕಾರ್ಯವನ್ನು ಮುಂದುವರಿಸಿದ್ದಾರೆ. ಪರಮೇಶ್ವರ್ ಒಡೆತನದ ತುಮಕೂರಿನ ಹೆಗ್ಗೆರೆಯಲ್ಲಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜು, ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು ಮತ್ತು ನೆಲಮಂಗಲದ ಟಿ. ಬೇಗೂರು ಬಳಿ ಇರುವ ಮೆಡಿಕಲ್ ಕಾಲೇಜುಗಳ ಮೇಲೆ ಇಡಿ ದಾಳಿ ನಡೆಸಿದೆ. ಈ ವೇಳೆ ಕಾಲೇಜಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದೆ.
ತುಮಕೂರಿನಲ್ಲಿರುವ ತಾಂತ್ರಿಕ ಕಾಲೇಜಿನಲ್ಲಿ ಶೋಧ ನಡೆಸಿದ ಅಧಿಕಾರಿಗಳಿಗೆ ಆಸ್ತಿಯ ಕ್ರಯಪತ್ರವೊಂದು ಸಿಕ್ಕಿದೆ ಎನ್ನಲಾಗಿದೆ. ಜಿ ಪರಮೇಶ್ವರ್ ಮಾಜಿ ಶಾಸಕ ಶಫಿ ಅಹ್ಮದ್ರಿಂದ ಎಚ್.ಎಮ್.ಎಸ್ ಕಾಲೇಜು ಖರೀದಿಸಿದ್ದರು. ಸುಮಾರು 95 ಕೋಟಿ ರೂ. ಗೆ ಖರೀದಿ ಮಾಡಿದ್ದಾರೆ ಎಂದು ಕ್ರಯಪತ್ರದಲ್ಲಿ ನಮೂದಿಸಿದ್ದರೂ ಅಸಲಿಗೆ 140 ಕೋಟಿ ರೂ.ಗೆ ವ್ಯವಹಾರ ನಡೆದಿದೆ ಎನ್ನಲಾಗಿದೆ. ಪರಮೇಶ್ವರ್ ಸಂದಾಯ ಮಾಡಿದ್ದ ಹಣವನ್ನು ದುಬೈನಲ್ಲಿ ಇದ್ದ ಶಫಿ ಅಹ್ಮದ್ ಅವರ ಸಂಬಂಧಿ ಚಿನ್ನದ ವ್ಯಾಪಾರಿಗೆ ತಲುಪಿದೆ ಎನ್ನಲಾಗಿದೆ. ಇದು ರನ್ಯಾ ರಾವ್ಗೂ ನಂಟಿದೆಯಾ ಎಂಬ ಆಯಾಮದಲ್ಲಿ ಇಡಿ ಅಧಿಕಾರಿಗಳು ತನಿಖೆ ಶುರುಮಾಡಿದ್ದಾರೆ.
ಕೇವಲ ಎಚ್.ಎಮ್.ಎಸ್ ಕಾಲೇಜು ಒಂದೇ ಅಲ್ಲ, ನಗರದ ಪ್ರತಿಷ್ಠಿತ ಬಂಡಿಮನೆ ಕಲ್ಯಾಣಮಂಟಪವನ್ನೂ ಪರಮೇಶ್ವರ್ ಖರೀಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. ಇದರ ಜೊತೆ ಮೆಡಿಕಲ್ ಸೀಟ್ ಬ್ಲಾಕಿಂಗ್ ದಂಧೆ ಕೂಡ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆಯುತ್ತಿದೆ ಎಂಬ ಆರೋಪದ ಆಯಾಮದಲ್ಲೂ ಶೋಧ ನಡೆದಿದೆ.
ಸತತ 14 ಗಂಟೆಗಳ ಕಾಲ 7 ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ರಾತ್ರಿ ಕೂಡ ಎರಡೂ ಕಡೆಗಳಲ್ಲಿ ಶೋಧ ನಡೆದಿದೆ. ಇಂದು ಮುಂಜಾನೆ 6 ಗಂಟೆಯಿಂದಲೇ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.














