ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ ಬುಧವಾರ ಬೆಳಗ್ಗೆ ಶುರುವಾದ ಇಡಿ ದಾಳಿ ಇದೀಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ಐವರು ಶಾಸಕರು ಹಾಗೂ ಒಬ್ಬ ಸಂಸದರ ಮೇಲೆ ಇಡಿ ಅಧಿಕಾರಿಗಳು ಸತತ 15 ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ವರ್ಷಗಳ ಹಿಂದೆ ಬಹು ಕೋಟಿ ರೂಪಾಯಿ ಭ್ರಷ್ಟಾಚಾರ ಪ್ರಕರಣವಾಗಿ ಬೆಳಕಿಗೆ ಬಂದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಚುನಾವಣೆಯಲ್ಲಿ ಬಳಸಲಾಗಿದ್ದು, ಇದಕ್ಕೆ ಕೆಲ ಕಾಂಗ್ರೆಸ್ ನಾಯಕರ ನೇರ ಸಂಬಂಧವಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ದಾಳಿಗಳು ನಡೆಯುತ್ತಿವೆ. ಈ ಹಿಂದೆ ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ಅವರ ಆಪ್ತ ಸಹಾಯಕರನ್ನು ಬಂಧಿಸಲಾಗಿತ್ತು. ಇದೀಗ, ಮತ್ತೆ ಹಳೆಯ ದಾಖಲೆಗಳ ಆಧಾರದ ಮೇಲೆ ಇಡಿ ಎಚ್ಚೆತ್ತುಕೊಂಡಿದ್ದು, ರಾಜಕೀಯ ವಲಯದ ಹಲವರಿಗೆ ನಿದ್ರೆ ಕದ್ದಂತಾಗಿದೆ.
ಇಡಿ ಅಧಿಕಾರಿಗಳು ಬಳ್ಳಾರಿ ಲೋಕಸಭಾ ವ್ಯಾಪ್ತಿಯ ಪ್ರಮುಖ ಕಾಂಗ್ರೆಸ್ ನಾಯಕರ ಮನೆಗಳಲ್ಲಿ ದಾಳಿ ನಡೆಸಿದ್ದು, ಅವರುಗಳು
- ಬಳ್ಳಾರಿ ಸಂಸದ ಇ. ತುಕಾರಾಂ
- ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ
- ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ
- ಕಂಪ್ಲಿ ಶಾಸಕ ಜೆ.ಎನ್. ಗಣೇಶ್
- ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ
- ಕೂಡ್ಲಿಗಿ ಶಾಸಕ ಎನ್.ಟಿ. ಶ್ರೀನಿವಾಸ್
ದಾಳಿಯ ಸಂದರ್ಭ ಎಲ್ಲಾ ಶಾಸಕರ ಮನೆಗಳಿಗೆ ಲಾಕ್ ಹಾಕಿ, ಪ್ರತ್ಯೇಕವಾಗಿ ಕೂರಿಸಿ ಒಂದೇ ಮಾದರಿಯ 28 ಪ್ರಶ್ನೆಗಳನ್ನು ಕೇಳಿ, ಉತ್ತರಗಳನ್ನು ದಾಖಲಿಸಲಾಗಿದೆ. ದಾಳಿ ವೇಳೆ ಕೊನೆಯ ಎರಡು ವರ್ಷಗಳ ಬ್ಯಾಂಕ್ ಖಾತಾ ವಿವರಗಳು, ಮೊಬೈಲ್ ಫೋನ್‌ಗಳು ವಶ, ಹಾಗು ಡಿಲೀಟ್ ಮಾಡಿದ ಸಂದೇಶಗಳ ಪುನಃಪ್ರಾಪ್ತಿ ನಡೆದಿದೆ.
ಮಹತ್ವದ ಪತ್ತೆಗಳು:
- ಮಾಜಿ ಸಚಿವ ನಾಗೇಂದ್ರ ಆಪ್ತರ ಮನೆಯ ದಾಳಿಯ ಸಮಯದಲ್ಲಿ ಸಿಕ್ಕ ಡೈರಿಯಲ್ಲಿ ಶಾಸಕರಿಗೆ ಹಣ ಪಾವತಿಸಿದ ದಾಖಲೆಗಳು ಈ ಬಾರಿಗೆ ಇಡಿ ಕ್ರಮಕ್ಕೆ ದಾರಿ ಮಾಡಿವೆ.
- ಈ ಡೈರಿಯ ಪ್ರತಿಯನ್ನು ತೋರಿಸಿ, ಶಾಸಕರಿಗೆ ಮತ್ತೆ ಪ್ರಶ್ನೆಗಳು ಕೇಳಲಾಗಿದೆ.
- ದಾಳಿಗೆ ಒಳಗಾಗದ ಕೆಲ ಶಾಸಕರ ಮನೆಗಳಿಂದವೂ ಪ್ರಮುಖ ದಾಖಲೆಗಳು ವಶ ಮಾಡಲಾಗಿದೆ.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, “ನನ್ನ ಮನೆಯಲ್ಲಿ ಯಾವುದೇ ಅಕ್ರಮ ದಾಖಲೆ ಸಿಕ್ಕಿಲ್ಲ. ಯಾವುದೇ ದಾಖಲೆ ಬೇಕಾದರೂ ಕೊಡಲು ಸಿದ್ಧ. ಕಾಂಗ್ರೆಸ್ ನಾಯಕರ ವಿರುದ್ಧ ಟಾರ್ಗೆಟ್ ಮಾಡಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.















