ದಾವಣಗೆರೆ (Davanagere): ಬಿಜೆಪಿ ತನ್ನ ಆರೋಪವನ್ನು ಮುಚ್ಚಿಕೊಳ್ಳಲು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯದ ತನಿಖೆಗೆ ಒಳಪಡಿಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್ ನೀಡಿರುವುದನ್ನು ಖಂಡಿಸಿ ಇಲ್ಲಿನ ಜಯದೇವ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಿಬಿಐ, ಇ.ಡಿ, ಆದಾಯ ತೆರಿಗೆ ಇಲಾಖೆಗಳು ಇಂದು ಸ್ವತಂತ್ರ್ಯ ಸಂಸ್ಥೆಗಳಾಗಿ ಉಳಿದಿಲ್ಲ. ಅವುಗಳನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ತನಿಖೆಗೆ ಒಳಪಡಿಸಲಾಗುತ್ತಿದೆ. ಮಹಾನ್ ನಾಯಕರನ್ನೇ ಬಿಟ್ಟಿಲ್ಲ. ನಿಮ್ಮ ಪಾಡೇನು ಎಂಬ ಸಂದೇಶ ಕೊಡಲು ಈ ಕೆಲಸ ಮಾಡಿದ್ದಾರೆ. ನೀವು ಏನೇ ಮಾಡಿದರೂ ನಾವು ಬಳೆ ತೊಟ್ಟಿಕೊಂಡಿದ್ದೇವಾ? ಎಂದು ಎಂದು ತಿರುಗೇಟು ನೀಡಿದರು.
ಸತ್ಯಾಂಶವಿಲ್ಲದ ಕಾರಣ ಈ ಪ್ರಕರಣ ಈಗಾಗಲೇ ಇತ್ಯರ್ಥಗೊಂಡಿದೆ. ಸುಳ್ಳು ಮೊಕದ್ದಮೆಗೆ ಜೀವಕೊಟ್ಟು ಸೋನಿಯಾಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಎಫ್‌ಐಆರ್ ದಾಖಲಿಸದೇ ಸಮನ್ಸ್, ವಾರೆಂಟ್ ಜಾರಿ ಮಾಡಲು ಸಾಧ್ಯವೇ? ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಆರೋಪಿಸಿದರು.
ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದಾಗ ಕಾರ್ಪೊರೇಟ್ ಸಂಸ್ಥೆಗಳಿಗೆ ಶೇ.30ರಷ್ಟು ಇದ್ದ ತೆರಿಗೆಯನ್ನು ಶೇ.22ಕ್ಕೆ ಇಳಿಸುವ ಮೂಲಕ ಮೋದಿ ಅವರು ಅಂಬಾನಿ, ಅದಾನಿ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಶ್ರೀಮಂತರ ಸಾಲ ಮನ್ನಾ ಮಾಡುತ್ತಿದ್ದಾರೆಯೇ ಹೊರತು ಬಡವರ, ರೈತರ, ಬೀದಿ ವ್ಯಾಪಾರಿಗಳ ಸಾಲ ಮನ್ನಾ ಮಾಡಿಲ್ಲ. 2022ಕ್ಕೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು. ಆದರೆ ಸಾಲ ದುಪ್ಪಟ್ಟಾಗಿದೆ ಎಂದು ಆರೋಪಿಸಿದರು.
ಒಂದು ಚಿಹ್ನೆ, ಒಬ್ಬ ನಾಯಕ, ಒಂದು ಸಿದ್ಧಾಂತ ಇರಬೇಕು ಎಂದು ಆರ್‌ಎಸ್ಎಸ್ ನಾಯಕರಾದ ಹೆಡಗೆವಾರ್, ಗೋಲ್ವಾಲ್ಕರ್ ಅವರು ಹೇಳುತ್ತಿದ್ದರು. ಇದನ್ನೇ ಸರ್ವಾಧಿಕಾರಿ ಹಿಟ್ಲರ್ ಹೇಳುತ್ತಿದ್ದ. ಹಿಟ್ಲರ್ ಯಹೂದಿಗಳನ್ನು ನಾಶ ಮಾಡಿದಂತೆ ಇಂದು ಹಿಂದುಳಿದವರು, ಅಲ್ಪಸಂಖ್ಯಾತರನ್ನು ನಾಶ ಮಾಡಲಾಗುತ್ತಿದೆ. ಸಂವಿಧಾನ ಬದಲಾವಣೆಯ ಮಾತುಗಳು ಕೇಳಿ ಬರುತ್ತಿದ್ದು, ಹೀಗಾದರೆ ಅಲ್ಪ ಸಂಖ್ಯಾತರು, ಹಿಂದುಳಿದವರು ಬದುಕುತ್ತಾರಾ ಎಂದು ಪ್ರಶ್ನಿಸಿದರು.