ಮನೆ ಸುದ್ದಿ ಜಾಲ ಯಾವುದೇ ಸಮಾಜದ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯ: ಎಲ್. ನಾಗೇಂದ್ರ

ಯಾವುದೇ ಸಮಾಜದ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯ: ಎಲ್. ನಾಗೇಂದ್ರ

0

ಮೈಸೂರು: ವೃತ್ತಿ ಜೊತೆಗೆ ಸಮಾಜದ ಅಭಿವೃದ್ಧಿಗಾಗಿ ಶಿಕ್ಷಣ ಬೇಕು. ಯಾವುದೇ ಸಮಾಜದ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯ ಎಂದು ಚಾಮರಾಜ ಕ್ಷೇತ್ರದ ವಿಧಾನಸಭಾ ಸದಸ್ಯರಾದ ಎಲ್ ನಾಗೇಂದ್ರ ತಿಳಿಸಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕರ್ನಾಟಕ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ರೀತಿ ಕೀಳರಿಮೆ ಬೇಡ. ಪ್ರತಿನಿತ್ಯ ನಿಮ್ಮ ವೃತ್ತಿ ಸಮಾಜಕ್ಕೆ ಸೇರಲು ಇತರೆ ಸಮುದಾಯದವರು ಕಾಯುತ್ತಿದ್ದಾರೆ. ಸಂವಿಧಾನದ ಸವಲತ್ತುಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ನೀವು ಕಾರ್ಯೋನ್ಮುಖರಾಗಬೇಕು. ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದರು.

ಎಲ್ಲ ಸಮಾಜದಲ್ಲೂ ಬಡವರಿದ್ದಾರೆ. ವೃತ್ತಿ ಬಗ್ಗೆ ಹೆಮ್ಮೆ/ಗೌರವ ಇರಲಿ. ಮನುಷ್ಯನ ಆಚಾರ ವಿಚಾರಗಳ ಗಳಿಂದ ಸಮಾಜದ ಏಳಿಗೆಗೆ ಶ್ರಮಿಸಬೇಕು. ಮುಂದಿನ ಪೀಳಿಗೆಗಳಿಗೂ ನಮ್ಮ ಸಂದೇಶ ಸಾಗಬೇಕು. ಕೆಳ ಸಮುದಾಯಗಳು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮೇಲ್ಪಂಕ್ತಿಗೆ ಬರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ವಿಜಯನಗರ ಸುದರ್ಶನಾರಸಿಂಹ ಕ್ಷೇತ್ರದ ಪೀಠಾಧಿಪತಿಗಳಾದ ಪರಮಪೂಜ್ಯ ನಾಡೋಜ ಡಾ. ಭಾಷ್ಯಂ ಸ್ವಾಮೀಜಿಗಳು ಮಾತನಾಡಿ ಸಮುದಾಯದ ಜನರಿಗೆ ಸವಿತಾ ಮಹರ್ಷಿ ತತ್ವಗಳ ಮಹತ್ವ ತಿಳಿಯಬೇಕು ಎಂದರು.

ಮನಸ್ಸಿನ ಕಲ್ಮಶವನ್ನು ಹೋಗಲಾಡಿಸಿ ಮಾನವನ ಉಜ್ಜಿವನಕ್ಕಾಗಿ ಹಾಗೂ ಸಮಾನತೆಗಾಗಿ ಜನ್ಮ ತಾಳಿದವರು ಸವಿತಾ ಮಹರ್ಷಿಗಳು. ಸವಿತಾ ಸಮಾಜದ ಉತ್ಕೃಷ್ಟತೆಯನ್ನು ಅಳೆಯಲು ಸಾಧ್ಯವಿಲ್ಲ. ಸ್ವತಃ ಕುವೆಂಪುರವರು ಸವಿತಾ ಸಮಾಜಕ್ಕೆ ತಲೆಬಾಗಬೇಕು ಎಂದು ಹೇಳಿದ್ದಾರೆ. ಇದು ಸಾಧಾರಣ ಸಮಾಜವಲ್ಲ, ಪರಮಾತ್ಮನ ಸಾಕ್ಷಾತ್ಕಾರ ಇರುವವರು ಮಾತ್ರ ಮಹರ್ಷಿಗಳಾಗಿ ಋಷಿಮುನಿಗಳಾಗಿ ಜನಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

ಉರಿಲಿಂಗ ಪೆದ್ದಿ ಮಠದ ಪೀಠಾಧಿಪತಿಗಳಾದ ಜ್ಞಾನಪ್ರಕಾಶ ಸ್ವಾಮೀಜಿ ರವರು ಮಾತನಾಡಿ, ಭಾರತ ದೇಶ ಆದರ್ಶಗಳ ತವರು ಸವಿತಾ ಸಮಾಜ ಸ್ವಾಭಿಮಾನದ ಸಂಕೇತ. ಕರ್ತವ್ಯ ಪ್ರಜ್ಞೆ ಬರೆದ ಸಮಾಜವಿದು. ಪವಿತ್ರವಾದ ವೇದಗಳಲ್ಲಿ ಸಾಮವೇದದ ಕರ್ತೃ ಸವಿತಾ ಮಹರ್ಷಿಗಳು ಎಂದು ತಿಳಿಸಿದರು.

ನೆನಪುಗಳಿಲ್ಲದ ಸಮಾಜ ಕನಸುಗಳನ್ನು ಕಟ್ಟಲು ಸಾಧ್ಯವಿಲ್ಲ. ಸ್ವಾರ್ಥದ ಕತ್ತರಿಗಳಾಗುವ ಬದಲು ಎಲ್ಲರನ್ನೂ ಒಗ್ಗೂಡಿಸುವ ಸ್ವಾಭಿಮಾನದ ಸೂಜಿ ಆಗಬೇಕು. ಸವಿತ ಸಮಾಜ ಬಹಳ ಇತಿಹಾಸವುಳ್ಳ ಶ್ರೇಷ್ಠ ಸಮಾಜವಾಗಿದೆ. ಸವಿತಾ ಮಹರ್ಷಿಗಳ ಆದರ್ಶವನ್ನು ಸಮುದಾಯದಲ್ಲಿ ಕೊಂಡೊಯ್ಯಬೇಕು.

ಆರ್ಥಿಕವಾಗಿ ಸಬಲರಾಗದಿದ್ದರೆ ಸಮಾಜಮುಖಿ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಸಾಮಾಜಿಕವಾಗಿ ಆರ್ಥಿಕವಾಗಿ ಭದ್ರತೆ ಮುಖ್ಯ. ಈ ಸಮಾಜದಲ್ಲಿ ಇಂದಿಗೂ ಶೈಕ್ಷಣಿಕವಾಗಿ ಉದ್ಯೋಗ ಕ್ಷೇತ್ರದಲ್ಲಿ ಹಾಗೂ ರಾಜಕಾರಣದಲ್ಲಿ ಹಿಂದುಳಿದಿದ್ದಾರೆ. ಕಟ್ಟ ಕಡೆಯ ಸಮುದಾಯಗಳು ದೇಶದ ತುತ್ತ ತುದಿಗೆ ಏರಬೇಕೆಂಬುದೇ ಸಂವಿಧಾನದ ಉದ್ದೇಶ ಎಂದರು.

ಆನೆ ಆನೆಯನ್ನು ಕೊಲ್ಲುವುದಿಲ್ಲ, ನರಿ ನರಿಯನ್ನು ಕೊಲ್ಲುವುದಿಲ್ಲ ಆದರೆ ಮನುಷ್ಯ ಮನುಷ್ಯನನ್ನು ಕೊಲ್ಲುತ್ತಾನೆ. ಈ ರೀತಿಯ ಕಲ್ಮಶಗಳನ್ನು ತೊರೆಯಬೇಕು. ಮಾನವತೆ, ಪ್ರೀತಿ ಹಾಗೂ ಸೌಹಾರ್ದತೆ ಇಲ್ಲದ ಮನುಷ್ಯ ಪರಿಪೂರ್ಣನಾಗುವುದಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್, ಉಪಮಹಾಪೌರರಾದ ಡಾ. ಜಿ ರೂಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಮ್ ಡಿ ಸುದರ್ಶನ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಶಿವರಾಂ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷರಾದ ರಘು ಕೌಟಿಲ್ಯ, ಸವಿತಾ ಸಮಾಜದ ರಾಜ್ಯಾಧ್ಯಕ್ಷರಾದ ಸಂಪತ್ ಕುಮಾರ್ ಮತ್ತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಸವಿತಾ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.