ಹೊಸದಿಲ್ಲಿ(New Delhi): ಕಳೆದ ಎಂಟು ವರ್ಷದಲ್ಲಿ ಜೈವಿಕ ಆರ್ಥಿಕತೆಯ ಮೌಲ್ಯವು ಎಂಟು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಗುರುವಾರದಿಂದ ಆರಂಭವಾದ ಎರಡು ದಿನಗಳ ‘ಬಯೋಟೆಕ್ ಸ್ಟಾರ್ಟಪ್ ಎಕ್ಸ್‌ಪೋ’ಗೆ ಚಾಲನೆ ನೀಡಿ ಮಾತನಾಡಿದ ಅವರು, ಎಂಟು ವರ್ಷಗಳ ಹಿಂದೆ ಜೈವಿಕ ಆರ್ಥಿಕತೆ ಮೌಲ್ಯವು 10 ಬಿಲಿಯನ್ ಡಾಲರ್ ಇತ್ತು. ಆದರೆ, ಎಂಟು ವರ್ಷದಲ್ಲಿ 80 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಹಾಗಾಗಿ, ಭಾರತವು ಜಾಗತಿಕ ಜೈವಿಕ ತಂತ್ರಜ್ಞಾನದ ಪರಿಸರ ವ್ಯವಸ್ಥೆಯ ಅಗ್ರ 10 ರಾಷ್ಟ್ರಗಳ ಸಾಲಿಗೆ ಸೇರುವ ಕಾಲ ದೂರವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶದ ಎಲ್ಲ ಕ್ಷೇತ್ರಗಳ ಏಳಿಗೆಗೂ ಕೇಂದ್ರವು ಉತ್ತೇಜನ ನೀಡುತ್ತಿದೆ. ಸುಲಭವಾಗಿ ಉದ್ಯಮ ಕೈಗೊಳ್ಳುವ ವಾತಾವರಣ (ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್) ನಿರ್ಮಿಸಲಾಗಿದೆ. ಹಾಗಾಗಿಯೇ, ಎಂಟು ವರ್ಷಗಳ ಹಿಂದೆ ನೂರರಷ್ಟು ಇದ್ದ ನವೋದ್ಯಮಗಳ ಸಂಖ್ಯೆ ಈಗ 70 ಸಾವಿರಕ್ಕೆ ಏರಿಕೆಯಾಗಿದೆ. ಇವುಗಳಲ್ಲಿ ಐದು ಸಾವಿರ ನವೋದ್ಯಮಗಳು ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿವೆ. ಬಯೋಟೆಕ್ ಇನ್‌ಕ್ಯುಬೇಟರ್‌ಗಳ ಸಂಖ್ಯೆ 6 ರಿಂದ 75 ತಲುಪಿದೆ. ಬಯೋಟೆಕ್ ಉತ್ಪನ್ನಗಳು 10 ರಿಂದ 700 ದಾಟಿವೆ ಎಂದು ಮಾಹಿತಿ ನೀಡಿದರು.
ಬಯೋ ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜನ, ಉದ್ಯಮಿಗಳು, ಹೂಡಿಕೆದಾರರು, ವಿಜ್ಞಾನಿಗಳು, ಸಂಶೋಧಕರು, ಉತ್ಪಾದಕರ ಮಧ್ಯೆ ಸಂವಹನ ಏರ್ಪಡಿಸುವ ದಿಸೆಯಲ್ಲಿ ಬಯೋಟೆಕ್ ಸ್ಟಾರ್ಟಪ್ ಎಕ್ಸ್‌ಪೋ ಆಯೋಜಿಸಿದ್ದು, ‘ಬಯೋಟೆಕ್ ಸ್ಟಾರ್ಟಪ್ ಇನೋವೇಷನ್ಸ್: ಟುವರ್ಡ್ಸ್ ಆತ್ಮನಿರ್ಭರ ಭಾರತ್’ ಎಂಬುದು ಎಕ್ಸ್‌ಪೋದ ಧ್ಯೇಯ ವಾಕ್ಯವಾಗಿದೆ.