ಮುಂಬೈ(Mumbai): ಮಹಾರಾಷ್ಟ್ರದ ಸಿಎಂ ಸ್ಥಾನಕ್ಕೆ ಉದ್ದವ್ ಠಾಕ್ರೆ ರಾಜೀನಾಮೆ ಸಲ್ಲಿಸಿದ್ದ ಬೆನ್ನಲ್ಲೇ ಇಂದು ಸಂಜೆ ಏಕನಾಥ್ ಶಿಂಧೆ ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ
ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಗುರುವಾರ ಸಂಜೆ 7.30 ಗಂಟೆಗೆ ನಡೆಯಲಿರುವ ಸರಳ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿ ಬಿಜೆಪಿಯ ಏಕನಾಥ್ ಶಿಂಧೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಘೋಷಣೆ ಮಾಡಿದರು.
2019ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮಾಡಿಕೊಂಡಿದ್ದವು. ಜನರು ನಮಗೆ ಸರ್ಕಾರ ರಚಿಸಲು ಬೇಕಾದಷ್ಟು ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದರು. ಆದರೆ, ಶಿವಸೇನೆಯು ಕಾಂಗ್ರೆಸ್, ಎನ್ಸಿಪಿ ಜೊತೆ ಮೈತ್ರಿ ಮಾಡಿಕೊಂಡಿತು. ಬಾಳಾಸಾಹೇಬ್ ತಮ್ಮ ಜೀವನದುದ್ದಕ್ಕೂ ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಾ ಬಂದರೂ ಅವರೊಂದಿಗೆ ಶಿವಸೇನೆ ಕೈಜೋಡಿಸಿತು. ಹಿಂದುತ್ವವಾದಿ ಮತ್ತು ಸಾವರ್ಕರ್ ಅವರ ವಿರುದ್ಧ ಇರುವವರೊಂದಿಗೆ ಸೇನೆ ಸೇರಿಕೊಂಡು, ಜನರ ಆದೇಶವನ್ನು ಅವಮಾನಿಸಿದರು ಎಂದು ತಿಳಿಸಿದರು.
ಇದೇ ವೇಳೆ, ಹೊಸ ಸರ್ಕಾರದಲ್ಲಿ ತಾವು ಭಾಗಿಯಾಗುವುದಿಲ್ಲ ಎಂದು ಫಡ್ನವೀಸ್ ಸ್ಪಷ್ಟಪಡಿಸಿದರು.
ಒಂದೆಡೆ ದಾವೂದ್ ಇಬ್ರಾಹಿಂನನ್ನು ವಿರೋಧಿಸಿದ ಶಿವಸೇನೆ, ಮತ್ತೊಂದೆಡೆ ದಾವೂದ್ಗೆ ಸಹಾಯ ಮಾಡಿದ ಆರೋಪದಲ್ಲಿ ಜೈಲಿಗೆ ಹೋಗಿ ಬಂದ ವ್ಯಕ್ತಿಯನ್ನೇ ಸಂಪುಟದಲ್ಲಿ ಇಟ್ಟುಕೊಂಡಿತ್ತು. ಇದರಿಂದ ಜನರು ಬೇಸತ್ತು ಹೋದರು ಎಂದು ಅವರು ಹೇಳಿದರು.
ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾತನಾಡಿ, ಬಾಳಾಸಾಹೇಬ್ ಅವರ ಹಿಂದುತ್ವವನ್ನು ಮುಂದೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ರಾಜ್ಯದಲ್ಲಿ ಅಭಿವೃದ್ಧಿ ಪರ ಕಾರ್ಯಗಳು ಮುಂದುವರೆಯಲಿದ್ದು, ನಮ್ಮ ಪರವಾಗಿ 50 ಶಾಸಕರಿದ್ದಾರೆ ಎಂದರು.