ಮನೆ ರಾಜಕೀಯ ಮಹಾರಾಷ್ಟ್ರದ ಸಿಎಂ ಆಗಿ ಏಕನಾಥ ಶಿಂಧೆ, ಡಿಸಿಎಂ ಆಗಿ ದೇವೇಂದ್ರ ಫಡ್ನವೀಸ್‌ ಪ್ರಮಾಣ ವಚನ ಸ್ವೀಕಾರ

ಮಹಾರಾಷ್ಟ್ರದ ಸಿಎಂ ಆಗಿ ಏಕನಾಥ ಶಿಂಧೆ, ಡಿಸಿಎಂ ಆಗಿ ದೇವೇಂದ್ರ ಫಡ್ನವೀಸ್‌ ಪ್ರಮಾಣ ವಚನ ಸ್ವೀಕಾರ

0
ಚಿತ್ರ ಕೃಪೆ: ಎಎನ್‌ಐ

ಮುಂಬೈ (Mumbai): ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಶಿವಸೇನೆಯ ಬಂಡಾಯ ಗುಂಪಿನ ನಾಯಕ ಏಕನಾಥ ಸಂಭಾಜಿ ಶಿಂಧೆ ಹಾಗೂ ಉಪ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಗಂಗಾಧರ್‌ ರಾವ್‌ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ತಾನು ನೂತನ ಸರ್ಕಾರ ಭಾಗವಾಗುವುದಿಲ್ಲ ಎಂದು ಹೇಳಿದ್ದ ಬಿಜೆಪಿಯ ದೇವೇಂದ್ರ ಗಂಗಾಧರ್‌ ರಾವ್‌ ಫಡ್ನವೀಸ್ ಕೊನೆ ಕ್ಷಣದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ರಾಜ್ಯಪಾಲ ಭಗತ್‌ ಸಿಂಗ್‌ ಕೊಶ್ಯಾರಿ ಅವರು ಇಬ್ಬರಿಗೂ ಪ್ರಮಾಣ ವಚನ ಬೋಧಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಏಕನಾಥ ಶಿಂಧೆ ಹಾಗೂ ದೇವೇಂದ್ರ ಫಡ್ನವೀಸ್‌ ಅವರನ್ನು ಅಭಿನಂದಿಸಿದ್ದಾರೆ.

ಮಹಾರಾಷ್ಟ್ರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಏಕನಾಥ ಶಿಂಧೆ ಅವರಿಗೆ ಅಭಿನಂದನೆಗಳು. ತಳಮಟ್ಟದಿಂದ ಬೆಳೆದು ಬಂದ ನಾಯಕ, ಅವರು ತಮ್ಮ ಅಗಾಧ ರಾಜಕೀಯ, ಶಾಸಕಾಂಗ ಮತ್ತು ಆಡಳಿತಾತ್ಮಕ ಅನುಭವವನ್ನು ತಮ್ಮೊಂದಿಗೆ ತರುತ್ತಾರೆ. ಮಹಾರಾಷ್ಟ್ರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಅವರು ಶ್ರಮಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಸಂಜೆ 7.30 ಕ್ಕೆ ರಾಜಭವನದದಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಬ್ಬರು ನಾಯಕರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇಬ್ಬರ ಪ್ರಮಾಣ ವಚನ ಸ್ವೀಕಾರ ವೇಳೆ ವಂದೇ ಮಾತರಂ, ಭಾರತ್‌ ಮಾತಾಕಿ ಜೈ ಘೋಷಣೆ ಮೊಳಗಿದವು. ದಿವಂಗತ ಬಾಳಾ ಸಾಹೇಬ್ ಠಾಕ್ರೆ ಅವರಿಗೆ ಜಯಘೋಷ ಮೊಳಗಿತು. ಜೈ ಶಿವಾಜಿ, ಜೈ ಶ್ರೀರಾಂ ಉದ್ಘಾರ ಕೂಡ ಕೇಳಿ ಬಂತು. ಇಬ್ಬರೂ ಮರಾಠಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕಳೆದ 10 -12 ದಿನಗಳಿಂದ ಮಹಾರಾಷ್ಟ್ರದಲ್ಲಿ ಉಂಟಾಗಿದ್ದ ರಾಜಕೀಯ ಹೈಡ್ರಾಮಕ್ಕೆ ‘ವಿಧ್ಯುಕ್ತ’ ತೆರೆ ಬಿದ್ದಿದೆ. ಎರಡೂವರೆ ವರ್ಷಗಳ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ನ ಮಹಾ ವಿಕಾಸ್‌ ಅಘಾಡಿ ಸರ್ಕಾರದ ಆಡಳಿತ ಅಧಿಕೃತವಾಗಿ ಮುಕ್ತಾಯಗೊಂಡಿದೆ.

ಬುಧವಾರ ಉದ್ಧವ್‌ ಠಾಕ್ರೆ ರಾಜೀನಾಮೆ ನೀಡಿದ ಬಳಿಕ ಏಕನಾಥ ಶಿಂಧೆ ಬಣ ಬಿಜೆಪಿಯೊಂದಿಗೆ ಸರ್ಕಾರ ನಡೆಸಲಿದ್ದು, ದೇವೇಂದ್ರ ಫಡ್ನವೀಸ್‌ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅಚ್ಚರಿ ಎಂಬಂತೆ ಏಕನಾಥ ಶಿಂಧೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಯ್ತು.

ಇದಾದ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ್ದ ಶಿಂಧೆ ಹಾಗೂ ಫಡ್ನವೀಸ್‌ ಸರ್ಕಾರ ರಚನೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ ತಾನು ಈ ಸರ್ಕಾರದ ಭಾಗವಾಗಿರುವುದಿಲ್ಲ ಎಂದು ಫಡ್ನವೀಸ್‌ ಹೇಳಿದ್ದರು.

ಕೇವಲ ಶಿಂಧೆ ಮಾತ್ರ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎನ್ನುವ ಮಾಹಿತಿ ಇತ್ತು. ಆದರೆ ಕೊನೇ ಕ್ಷಣದಲ್ಲಿ ಫಡ್ನವೀಸ್‌ ಅವರು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸೂಚನೆ ಮೇರೆಗೆ ದೇವೇಂದ್ರ ಫಡ್ನವೀಸ್‌ ಅವರು ಕೊನೆ ಕ್ಷಣದಲ್ಲಿ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.