ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯಿದೆ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮಂಗಳವಾರ ಹಿಂದೆ ಸರಿದಿದ್ದಾರೆ.
ಇಂದು ಸಿಜೆಐ ಖನ್ನಾ ಮತ್ತು ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ ಪ್ರಕರಣದ ವಿಚಾರಣೆ ನಡೆಸಬೇಕಿತ್ತು. ತಮ್ಮನ್ನು ಒಳಗೊಂಡಿರದ ಪೀಠದೆದುರು 2025ರ ಜನವರಿಯಲ್ಲಿ ಪ್ರಕರಣ ಪಟ್ಟಿ ಮಾಡುವಂತೆ ಸಿಜೆಐ ಸೂಚಿಸಿದರು. ಅಷ್ಟರೊಳಗೆ ತಮ್ಮ ಮನವಿಗಳನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ಅವರು ಹೇಳಿದರು.
ನ್ಯಾಯಮೂರ್ತಿಗಳಾದ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಈ ವರ್ಷದ ಆರಂಭದಲ್ಲಿ ಚುನಾವಣಾ ಆಯುಕ್ತರ ನೇಮಕಾತಿ ಕಾಯಿದೆಗೆ ತಡೆ ನೀಡಲು ನಿರಾಕರಿಸಿತ್ತು.
ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಚುನಾವಣಾ ಆಯುಕ್ತರ (ಇಸಿ) ಹುದ್ದೆಗಳನ್ನು ನೇಮಕ ಮಾಡಲು ಪ್ರಧಾನಿ, ಕೇಂದ್ರ ಸಂಪುಟ ಸಚಿವ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಅವರನ್ನು ಒಳಗೊಂಡ ಹಾಗೂ ಸಿಜೆಐ ಅವರ ಉಪಸ್ಥಿತಿ ಇಲ್ಲದ ಆಯ್ಕೆ ಸಮಿತಿಗೆ ಕಾಯಿದೆ ಅವಕಾಶ ನೀಡುತ್ತದೆ.
ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ಜ್ಞಾನೇಶ್ ಕುಮಾರ್ ಅವರ ನೇಮಕದಲ್ಲಿ ಮಧ್ಯಪ್ರವೇಶಿಸಲು ಅದು ಆಗ ಸಮ್ಮತಿ ಸೂಚಿಸಿರಲಿಲ್ಲ.
ಸಮಿತಿಯಲ್ಲಿ ಪ್ರಧಾನಿ, ಸಿಜೆಐ ಹಾಗೂ ವಿರೋಧ ಪಕ್ಷದ ನಾಯಕರು ಇರಬೇಕು ಎಂಬ ಅನೂಪ್ ಬರನ್ವಾಲ್ ಪ್ರಕರಣದ ತೀರ್ಪಿಗೆ ವ್ಯತರಿಕ್ತವಾಗಿ ಕಾಯಿದೆಗೆ ತಿದ್ದುಪಡಿ ತಂದು ಸಿಜೆಐ ಬದಲಿಗೆ ಸಂಪುಟ ಸಚಿವರನ್ನು ಸದಸ್ಯರನ್ನಾಗಿ ನೇಮಕ ಮಾಡಲು ಅನುವು ಮಾಡಿಕೊಟ್ಟಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.
ಚುನಾವಣಾ ಆಯುಕ್ತರನ್ನು 73 ವರ್ಷಗಳಿಂದ ಕಾರ್ಯಾಂಗದಿಂದ ಪ್ರತ್ಯೇಕವಾಗಿ ನೇಮಕ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು.