ಮೈಸೂರು : ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಅನುಸರಿಸುತ್ತಿರುವ ನಡೆ ಹಾಸ್ಯಾಸ್ಪದ ಎಂದು ಮಾಜಿ ಮಹಾಪೌರ ಸಂದೇಶ್ ಸ್ವಾಮಿ ತಿಳಿಸಿದ್ದಾರೆ.
ಇತ್ತೀಚೆಗೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಭೇಟಿ ಮಾಡಿ, ನಂತರ ಸುದ್ದಿಗಾರರೊಂದಿಗೆ ಮಾತಾಡಿರುವ ಚುನಾವಣಾ ಆಯುಕ್ತರು, ಮೈಸೂರು ಸೇರಿದಂತೆ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿ ಪಡಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಒಂದು ವೇಳೆ ಹೊಸ ಮೀಸಲಾತಿ ಪ್ರಕಟಿಸದಿದ್ದರೆ ಹಳೇ ಮೀಸಲಾತಿಯಡಿ ಚುನಾವಣೆ ನಡೆಸುವುದಾಗಿ ಹೇಳಿರುವುದನ್ನು ಗಮನಿಸಿದಾಗ ಇದು ಚುನಾವಣಾ ಆಯೋಗದ ಅಸಹಾಯಕತೆಯು ಹಾಗೂ ಸಂವಿಧಾನದ ಆಶಯಗಳ ಪರಿಪಾಲನೆ ಮಾಡುವಲ್ಲಿನ ಲೋಪವು ಆಗಿದೆ ಎಂದು ಕಿಡಿಕಾರಿದ್ದಾರೆ.
ಜನಸಾಮಾನ್ಯರಿಗೆ ಅಧಿಕಾರ ವಿಕೇಂದ್ರೀಕರಣ ಆಗಬೇಕೆಂಬ ಸದಾಶಯಗಳೊಂದಿಗೆ, ಪಂಚಾಯಿತಿ ಮಟ್ಟದಿಂದ ಪಾಲಿಕೆಯವರೆಗೆ ಆಡಳಿತ ನಡೆಸಲು ಪ್ರತಿಯೊಂದು ಸಮುದಾಯಕ್ಕು ಅವಕಾಶ ಕಲ್ಪಿಸಬೇಕು ಎಂಬುದು ಸಂವಿಧಾನಶಿಲ್ಪ ಡಾ.ಬಿ.ಆರ್ ಅಂಬೇಡ್ಕರ್ ಅವರ ಮೀಸಲಾತಿಯ ಆಶಯ. ಆದರೆ ಅಧಿಕಾರಕ್ಕೆ ಬರುವ ಸರ್ಕಾರಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೀಸಲಾತಿ ನಿಗದಿಗೊಳಿಸಲು ಮೀನಮೇಷ ಎಣಿಸುವುದು ಸರ್ವ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಚುನಾವಣಾ ಆಯೋಗ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ರೋಸ್ಟರ್ ಪದ್ಧತಿಯಡಿ ಮೀಸಲಾತಿ ಕಲ್ಪಿಸುವಂತೆ ನೋಡಿಕೊಳ್ಳಬೇಕು ಮತ್ತು ನಿಯಮದಂತೆ ಆರು ತಿಂಗಳೊಳಗೆ ಚುನಾವಣೆ ನಡೆಸುವಂತೆ ತಾಕೀತು ಮಾಡುವಲ್ಲಿ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಮೈಸೂರು ಪಾಲಿಕೆಗೆ ಎರಡು ವರ್ಷವಾದರೂ ಚುನಾವಣೆ ನಡೆಸಿಲ್ಲ. ಮೈಸೂರು ಜಿಲ್ಲಾ ಪಂಚಾಯಿತಿಗೆ ಆರೇಳು ವರ್ಷವಾದರೂ ಚುನಾವಣೆಯಾಗಿಲ್ಲ. ಬೃಹತ್ ಬೆಂಗಳೂರು ಪಾಲಿಕೆಗೂ ಐದು ವರ್ಷವಾದರೂ ಚುನಾವಣೆ ನಡೆಸದಿರುವುದು ಆಶ್ಚರ್ಯ ತರಿಸಿದೆ. ಸರ್ಕಾರಗಳು ಇಷ್ಟ ಬಂದಾಗ ಚುನಾವಣೆ ನಡೆಸುವುದಾದರೆ, ಚುನಾವಣಾ ನೀತಿ ನಿಯಮಗಳಿಗೆ ಬೆಲೆ ಇಲ್ಲವೇ? ಚುನಾವಣಾ ಆಯೋಗದ ಮನವಿಗೆ ಮಾನ್ಯತೆ ಇಲ್ಲವೇ ? ಎಂಬ ಪ್ರಶ್ನೆ ಕಾಡುತ್ತಿದೆ. ಕಡೆಗೆ ಚುನಾವಣಾ ಆಯೋಗ ನ್ಯಾಯಾಲಯದ ಮೊರೆ ಹೋಗಿ, ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ಕೊಡಿಸುವುದು ಒಂದು ರೀತಿ ಚುನಾವಣಾ ಆಯೋಗಕ್ಕೆ ರಾಜ್ಯ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂಬುದನ್ನು ಸಾಬೀತು ಪಡಿಸಲಿದೆ ಎಂದಿದ್ದಾರೆ.
ಮೈಸೂರು ನಗರ ಪಾಲಿಕೆಯಲ್ಲಿ ೧೯೮೩ರಲ್ಲಿ ೫೭ವಾರ್ಡುಗಳಿತ್ತು. ನಂತರ ೧೯೯೬ರಲ್ಲಿ ೬೫ ವಾರ್ಡುಗಳಾಗಿ ವಿಂಗಡಿಸಲಾಯಿತು. ನಂತರ ಮಹಾನಗರ ಪಾಲಿಕೆ ವ್ಯಾಪ್ತಿಗೆ ಹಲವು ಹೊಸ ಬಡಾವಣೆಗಳು ಸೇರಿವೆ. ಜತೆಗೆ ಅನೇಕ ರೆವಿನ್ಯೂ ಬಡಾವಣೆಗಳು ಒಳಗೊಂಡಿದ್ದರೂ ಕಳೆದ ಮೂರು ದಶಕಗಳಲ್ಲಿ ವಾರ್ಡುಗಳ ಸಂಖ್ಯೆ ಹೆಚ್ಚಳವಾಗಿಲ್ಲ. ಇವುಗಳ ಅಭಿವೃದ್ಧಿಗೆ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿರಬೇಕು. ರೆವಿನ್ಯೂ ಬಡಾವಣೆಗಳಿಗೆ ಪಾಲಿಕೆ ಮೂಲ ಸೌಕರ್ಯಗಳನ್ನು ಕಲ್ಪಿಸುತ್ತಿದ್ದರೂ, ಯಾವುದೇ ರೀತಿಯ ಕಂದಾಯ ವಸೂಲಿ ಮಾಡಲಾಗುತ್ತಿಲ್ಲ. ಇದೇ ರೀತಿ ಮುಂದುವರೆದರೆ ನಗರ ಪಾಲಿಕೆ ದಿವಾಳಿ ಆಗುವುದರಲ್ಲಿ ಅನುಮಾನವಿಲ್ಲ.
ಚುನಾವಣೆ ವಿಳಂಬವಾಗಿ ಕೌನ್ಸಿಲ್ ಸಭೆಗಳು ನಡೆಯದಿದ್ದರೆ ಅಭಿವೃದ್ಧಿ ಕುಂಠಿತವಾಗಿ ನಗರ ಹಿಂದುಳಿಯಲಿದೆ. ನಾಗರೀಕರು ಮೂಲ ಸೌಕರ್ಯಗಳಿಗೆ ಪರಿತಪಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಆಯಾಯ ಕಾಲಕ್ಕೆ ಸರಿಯಾಗಿ ಚುನಾವಣೆ ನಡೆಸಬೇಕು. ನಡೆಸಲು ವಿಳಂಬ ಧೋರಣೆ ತೋರಿದರೆ ಸರಿಯಾದ ಕಾಯ್ದೆಯ ಅಸ್ತ್ರ ಪ್ರಯೋಗಿಸಿ ಚುನಾವಣೆ ನಡೆಸುವಲ್ಲಿ ಚುನಾವಣಾ ಆಯೋಗ ಯಶಸ್ವಿಯಾಗಬೇಕು. ಇಂತಹ ಸಂದರ್ಭದಲ್ಲಿ ದಕ್ಷತೆಗೆ ಹೆಸರಾಗಿದ್ದ ಭಾರತ ಚುನಾವಣಾ ಆಯೋಗದ ಆಯುಕ್ತರಾಗಿದ್ದ ಟಿ.ಎನ್. ಶೇಷನ್ ಅವರ ಮಾರ್ಗದಲ್ಲಿ ಇಂದಿನ ಆಯುಕ್ತರುಗಳು ನಡೆಯಬೇಕಿದೆ.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಸಡೆಸಿ ಸುಮಾರು ೨ ರಿಂದ ೬ ವರ್ಷಗಳಾಗುತ್ತಿದ್ದರೂ ಈಗ ಚುನಾವಣಾ ಆಯೋಗ ನಿದ್ದೆಯಿಂದ ಎದ್ದಂತಿದೆ. ಇನ್ನು ಮುಂದಾದರೂ ಸ್ಥಳೀಯ ಸಂಸ್ಥೆಗಳಿಗೆ ಅವಧಿ ಮುಗಿದ ಕೂಡಲೇ ಚುನಾವಣೆ ನಡೆಸುವಲ್ಲಿ ಸರ್ಕಾರಕ್ಕೆ ಚಾಟಿ ಬೀಸುವ ಕೆಲಸವನ್ನು ಚುನಾವಣಾ ಆಯೋಗ ತಪ್ಪದೆ ಮಾಡಬೇಕು. ಸರ್ಕಾರವು ಸಹ ಸಂವಿಧಾನದ ಆಶಯಗಳ ಅನುಸಾರ ಚುನಾವಣೆ ನಡೆಸುವ ಹಾಗೂ ಕಾಲ ಕಾಲಕ್ಕೆ ಮೀಸಲಾತಿ ಕಲ್ಪಿಸುವ ಕೆಲವನ್ನು ಮಾಡಲಿ ಎಂದು ಸಂದೇಶ್ ಸ್ವಾಮಿ ಮನವಿ ಮಾಡಿದ್ದಾರೆ.














