ಚುನಾವಣೆಯ ದಿನಾಂಕ ಘೋಷಣೆಗೂ ಮುನ್ನ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ದಾಳಿ ನಡೆಸಿ ಯಾವುದೇ ವಸ್ತುಗಳನ್ನು ಜಪ್ತಿ ಮಾಡಿ, ವಶಕ್ಕೆ ಪಡೆದುಕೊಳ್ಳಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶ ಮಾಡಿದೆ.
ಚುನಾವಣೆ ದಿನಾಂಕ ಘೋಷಣೆಗೂ ಮೊದಲು ತಮಗೆ ಸೇರಿದ 530 ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡ ಚುನಾವಣಾಧಿಕಾರಿಗಳು ಮತ್ತು ಪೊಲೀಸರ ಕ್ರಮ ಪ್ರಶ್ನಿಸಿ ಬೆಂಗಳೂರಿನ ಶಿವಾಜಿನಗರದ ನಿವಾಸಿ ಇಷ್ತಿಯಾಕ್ ಅಹ್ಮದ್ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.
ಚುನಾವಣಾಧಿಕಾರಿಗಳು ಮತ್ತು ಪೊಲೀಸರು ವಶಪಡಿಸಿಕೊಂಡ 530 ಅಕ್ಕಿ ಮೂಟೆಗಳು ತಮ್ಮ ಸುಪರ್ದಿಗೆ ಬಂದ ಮೇಲೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಅದನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಬಾರದು ಎಂದು ಅರ್ಜಿದಾರರಿಗೆ ಷರತ್ತು ವಿಧಿಸಿರುವ ನ್ಯಾಯಾಲಯವು ಆ ಷರತ್ತು ಪಾಲಿಸುವ ಬಗ್ಗೆ ಅರ್ಜಿದಾರರಿಂದ ಮುಚ್ಚಳಿಕೆಯನ್ನೂ ಬರೆಸಿಕೊಂಡಿದೆ. ಈ ಷರತ್ತುಗಳ ಪಾಲನೆ ಅನ್ವಯಿಸಿ ಜಪ್ತಿ ಮಾಡಲಾದ ಅಕ್ಕಿಯ ಮೂಟೆಗಳನ್ನು ಬಿಡುಗಡೆಗೊಳಿಸುವಂತೆ ಚುನಾವಣಾಧಿಕಾರಿ ಮತ್ತು ಪೊಲೀಸರಿಗೆ ನಿರ್ದೇಶನ ನೀಡಿದೆ. ಅರ್ಜಿದಾರರು ಮತ್ತು ಚುನಾವಣಾಧಿಕಾರಿಗಳು ಇಬ್ಬರೂ ಈ ಷರತ್ತಿಗೆ ಬದ್ಧರಾಗಿರಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ತಾಕೀತು ಮಾಡಿದೆ.
ಷರತ್ತು ಉಲ್ಲಂಘಿಸಿ, ಅರ್ಜಿದಾರರು ಅಕ್ಕಿಯನ್ನು ವಿತರಿಸಿದ್ದು ಗಮನಕ್ಕೆ ಬಂದಲ್ಲಿ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಅರ್ಜಿದಾರರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ಮುಕ್ತರಾಗಿದ್ದಾರೆ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಬಿಬಿಎಂಪಿ ಚುನಾವಣಾಧಿಕಾರಿ ಮತ್ತು ಶಿವಾಜಿನಗರ ಪೊಲೀಸರು ಶೋಧ ನಡೆಸಿದ್ದಾರೆ. ಆದರೆ, ಬಿಬಿಎಂಪಿ ಚುನಾವಣಾಧಿಕಾರಿ ಯಾರು? ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ನಿಯೋಜಿಸಲ್ಪಟ್ಟವರು. ಆದರೆ, ದಾಳಿ ನಡೆದಿದ್ದು ಚುನಾವಣೆ ಘೋಷಣೆಗೆ ಮೊದಲು. ಮಾರ್ಚ್ 19ರಂದು ದಾಳಿ ನಡೆದಿದ್ದರೆ, ಮಾರ್ಚ್ 29ಕ್ಕೆ ಚುನಾವಣೆ ಘೋಷಣೆಯಾಗಿದೆ. ಚುನಾವಣಾಧಿಕಾರಿಗಳು ಅಥವಾ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಸಿಬ್ಬಂದಿ ಚುನಾವಣೆ ಘೋಷಣೆಗೂ ಮುಂಚೆ ಯಾವುದೇ ವಸ್ತುಗಳ ಶೋಧ ನಡೆಸುವುದು, ಜಪ್ತಿ ಮಾಡುವ ಅಧಿಕಾರ ಹೊಂದಿರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮುಂದುವರೆದು, ಚುನಾವಣಾ ಪ್ರಕ್ರಿಯೆ ನಡೆಸುವ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಮಾತ್ರಕ್ಕೆ ಚುನಾವಣೆ ಘೋಷಣೆಗೂ ಮೊದಲೇ ಅವರು ಆ ಅಧಿಕಾರವನ್ನು ಚಲಾಯಿಸುವಂತಿಲ್ಲ. ಅಷ್ಟಕ್ಕೂ ಸಾಮಾನ್ಯ ಸಂದರ್ಭಗಳಲ್ಲಿ ಶೋಧ ನಡೆಸಿ ಜಪ್ತಿ ಮಾಡುವ ಅಧಿಕಾರವನ್ನು ಅಗತ್ಯ ವಸ್ತುಗಳ ಕಾಯಿದೆ-1955ರ ಅಡಿ ಸಂಬಂಧಪಟ್ಟ ಪ್ರಾಧಿಕಾರ ಮತ್ತು ಅಧಿಕಾರಿಗಳಿಗೆ ನೀಡಲಾಗಿದೆ. ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಆ ಅಧಿಕಾರವನ್ನು ಚಲಾಯಿಸುವಂತಿಲ್ಲ. ಅದು ಕಾನೂನು ಬಾಹಿರ ಎಂದು ನ್ಯಾಯಾಲಯ ಹೇಳಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಸಯ್ಯದ್ ಉಮರ್ ಅವರು “ಯುಗಾದಿ, ರಂಜಾನ್, ದಸರಾ, ಕ್ರಿಸ್ಮಸ್ ಇತ್ಯಾದಿ ಹಬ್ಬಗಳಿಗೆ ಬಡವರಿಗೆ ಅಕ್ಕಿ ಮತ್ತು ಬಟ್ಟೆಗಳನ್ನು ಅರ್ಜಿದಾರರು ವಿತರಿಸುತ್ತಾರೆ. ಇದನ್ನು ಅವರು 15 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಆದರೆ, ಚುನಾವಣಾಧಿಕಾರಿಗಳು ಮತ್ತು ಶಿವಾಜಿನಗರ ಪೊಲೀಸರು ಮಾರ್ಚ್ 19ರಂದು ಏಕಾಏಕಿ ಅರ್ಜಿದಾರರಿಗೆ ಸೇರಿದ ದಾಸ್ತಾನು ಮಳಿಗೆ ಮೇಲೆ ದಾಳಿ ನಡೆಸಿ, ತಲಾ 25 ಕೆ ಜಿಯ 530 ಅಕ್ಕಿಯ ಮೂಟೆಗಳನ್ನು ಜಪ್ತಿ ಮಾಡಿಕೊಂಡು ದಾಸ್ತಾನು ಮಳಿಗೆಗೆ ಬೀಗ ಜಡಿದಿದ್ದಾರೆ. ಚುನಾವಣಾಧಿಕಾರಿಗಳ ಈ ಕ್ರಮ ಕಾನೂನು ಬಾಹಿರವಾಗಿದ್ದು, ತಕ್ಷಣ ವಶಪಡಿಸಿಕೊಂಡ ಅಕ್ಕಿಯ ಮೂಟೆಗಳನ್ನು ಬಿಡುಗಡೆಗೊಳಿಸಲು ನಿರ್ದೇಶನ ನೀಡಬೇಕು” ಎಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ್ದ ಭಾರತೀಯ ಚುನಾವಣಾ ಆಯೋಗದ ಪರ ವಕೀಲ ಎಸ್ ಆರ್ ದೊಡ್ಡವಾಡ ಅವರು “ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಅರ್ಜಿದಾರರು ಅಕ್ಕಿಯನ್ನು ದಾಸ್ತಾನು ಮಾಡಿಟ್ಟುಕೊಂಡಿದ್ದಾರೆ” ಎಂದು ಚುನಾವಣಾಧಿಕಾರಿಗಳ ಕ್ರಮವನ್ನು ಸಮರ್ಥಿಸಿಕೊಂಡರು. ಅಲ್ಲದೇ, ಚುನಾವಣೆಗೆ ದಿನಾಂಕ ಘೋಷಣೆ ಆಗುವ ಮುಂಚೆಯೇ ದಾಳಿ ನಡೆದಿದೆ. ಚುನಾವಣೆ ಘೋಷಣೆಗೆ ಮೊದಲೇ ದಾಳಿ ನಡೆಸಿ, ಜಪ್ತಿ ಮಾಡಿಕೊಳ್ಳುವ ಅಧಿಕಾರ ಚುನಾವಣಾಧಿಕಾರಿ ಅಥವಾ ಪೊಲೀಸರಿಗೆ ಇಲ್ಲ ಎನ್ನುವುದನ್ನೂ ಆಯೋಗದ ಪರ ವಕೀಲರು ಒಪ್ಪಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಸಮಾಜ ಸೇವಕ ಎಂಬುದಾಗಿ ಹೇಳಿಕೊಂಡಿರುವ ಬೆಂಗಳೂರಿನ ಶಿವಾಜಿ ನಗರದ ನಿವಾಸಿ ಇಷ್ತಿಯಾಕ್ ಅಹ್ಮದ್ ಬಡವರಿಗೆ ಹಂಚಲು ತಲಾ 25 ಕೆ ಜಿಯ 530 ಅಕ್ಕಿಯ ಮೂಟೆಗಳನ್ನು ದಾಸ್ತಾನು ಮಾಡಿದ್ದರು. ಆದರೆ, 2023ರ ಮಾರ್ಚ್ 19ರಂದು ಚುನಾವಣಾಧಿಕಾರಿ ಮತ್ತು ಪೊಲೀಸರು ದಾಳಿ ನಡೆಸಿ ಅವುಗಳನ್ನು ಜಪ್ತಿ ಮಾಡಿ, ದಾಸ್ತಾನು ಮಳಿಗೆಗೆ ಬೀಗ ಜಡಿದು, ನೋಟಿಸ್ ಜಾರಿಗೊಳಿಸಿದ್ದರು. ಈ ಸಂಬಂಧ ಅರ್ಜಿದಾರರು ಕಳೆದ 15 ವರ್ಷಗಳಿಂದ ಬಡವರಿಗೆ ಹಬ್ಬ ಹರಿದಿನಗಳಲ್ಲಿ ಬಟ್ಟೆ ಮತ್ತು ಅಕ್ಕಿ ಸೇರಿದಂತೆ ಇತರೆ ಅಗತ್ಯ ವಸ್ತುಗಳು ವಿತರಣೆ ಮಾಡುವುದಕ್ಕೆ ಸಂಗ್ರಹಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೆ, ಈ ಸಂಬಂಧ ಖರೀದಿ ಮಾಡಿದ್ದ ರಸೀದಿಗಳನ್ನು ಸಲ್ಲಿಸಿದ್ದರು. ಆದರೂ ಚುನಾವಣಾಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜತೆಗೆ ಜಪ್ತಿ ಮಾಡಿದ ಅಕ್ಕಿ ಮೂಟೆಗಳನ್ನು ಬಿಡುಗಡೆಗೊಳಿಸಿಲ್ಲ ಎಂದು ದೂರಿ ಇಷ್ತಿಯಾಕ್ ಹೈಕೋರ್ಟ್ ಮೆಟ್ಟಿಲೇರಿದ್ದರು.