ಬೆಂಗಳೂರು: ರಾಜ್ಯದಾದ್ಯಂತ 188 ಗ್ರಾಮ ಪಂಚಾಯಿತಿಗಳ 430 ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ (ಎಸ್ ಇಸಿ) ಚುನಾವಣೆಯನ್ನು ಪ್ರಕಟಿಸಿದೆ.
ಜುಲೈ 23 ರಂದು ಚುನಾವಣೆ ನಡೆಯಲಿದ್ದು, ಜುಲೈ 26 ರಂದು ಮತ ಎಣಿಕೆ ನಡೆಯಲಿದೆ. 14 ಗ್ರಾಮ ಪಂಚಾಯಿತಿಗಳ 207 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಆಗಸ್ಟ್ ನಲ್ಲಿ ಇವುಗಳ ಅವಧಿ ಮುಕ್ತಾಯವಾಗಲಿದೆ.
ಅಲ್ಲದೆ, ವಿವಿಧ ಕಾರಣಗಳಿಂದ ತೆರವಾಗಿರುವ 174 ಗ್ರಾಮ ಪಂಚಾಯಿತಿಗಳ 223 ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ ಎಂದು ಎಸ್ ಇಸಿ ತಿಳಿಸಿದೆ.
ಜು.6ಕ್ಕೆ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲು, ನಾಮಪತ್ರಗಳನ್ನು ಸಲ್ಲಿಸಲು ಜು.12ರಂದು ಕೊನೆಯ ದಿನವಾಗಿದೆ. ಇನ್ನು ಜು.13ರಂದು ನಾಮಪತ್ರಗಳನ್ನು ಪರಿಶೀಲಿಸಲು, ಜು.15ಕ್ಕೆ ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಇನ್ನು ಮತದಾನಕ್ಕೆ ಅವಶ್ಯವಿದ್ದರೆ, ಮತದಾನವನ್ನು ನಡೆಸಲು ಜು.23ಕ್ಕೆ ಸೂಚಿಸಲಾಗಿದೆ. ಮರು ಮತದಾನ ಅವಶ್ಯವಿದ್ದರೆ, ಮತದಾನವನ್ನು ಜು.25ಕ್ಕೆ ನಡೆಸಲು ಆಯೋಗ ತಿಳಿಸಿದೆ. ಜು.26ಕ್ಕೆ ಮತಗಳ ಎಣಿಕೆ ನಡೆಯಲಿದೆ.
ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜು.6 ಹಾಗೂ ಜು.26ರವರೆಗೆ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರಲಿದೆ. ಕಳೆದ ಮೇ ತಿಂಗಳಲ್ಲಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ನಿಗದಿ ಕುರಿತು ಆದೇಶ ಹೊರಡಿಸಿ ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ನಡವಳಿಗಳ ಅನ್ವಯ ಈ ಆದೇಶ ಪ್ರಕಟಿಸಲಾಗಿತ್ತು.