ಬಾಗಲಕೋಟೆ: ಅಧಿಕಾರಕ್ಕೆ ಬಿಜೆಪಿ ಬರಲಿದೆ ಎಂದು ಪ್ರತಿ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಗೊಂದಲ ಮಾಡಿಕೊಳ್ಳದೆ, ಎಲ್ಲರ ಜತೆ ಚರ್ಚಿಸಿ ಒಗ್ಗಟ್ಟಾಗಿ ಚುನಾವಣೆ ಎದುರಿಸಲಾಗುವುದು ಎಂದು ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೇರದಾಳ ಕ್ಷೇತ್ರಕ್ಕೆ ಶಾಸಕ ಸಿದ್ದು ಸವದಿಯೇ ಅಭ್ಯರ್ಥಿ ಎಂದು ಬಾಯಿತಪ್ಪಿ ಹೇಳಿದ್ದೇನೆ. ಪಕ್ಷದ ಚುನಾವಣಾ ಸಮಿತಿ ಅಭ್ಯರ್ಥಿ ಹೆಸರು ಅಂತಿಮಗೊಳಿಸಲಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.
ಸಚಿವ ಸೋಮಣ್ಣ ದೆಹಲಿಗೆ ಬೇರೆ ಕೆಲಸದ ಮೇಲೆ ಹೋಗಿದ್ದಾರೆ. ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರವಾಸ ಮಾಡಿದಷ್ಟೂ ಬಿಜೆಪಿ ಹೆಚ್ಚು ಸೀಟು ಗೆಲ್ಲಲಿದೆ. ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನು ಎದುರಿಸುವ ಶಕ್ತಿ ಕಾಂಗ್ರೆಸ್ ನಲ್ಲಿ ಯಾರಿಗೂ ಇಲ್ಲ. ಕಾಂಗ್ರೆಸ್ ನಾಯಕರ ಮುಖ್ಯಮಂತ್ರಿ ಆಗುವ ಕನಸು ನನಸಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಯಾವ ಕಾಂಗ್ರೆಸ್ ನವರು ತುರ್ತು ಪರಿಸ್ಥಿತಿ ಹೇರಿ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಎಲ್ಲರನ್ನೂ ಬಂಧಿಸಿದ್ದರೋ, ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಸಚಿವ ಬೈರತಿ ಬಸವರಾಜ, ಶಾಸಕ ವೀರಣ್ಣ ಚರಂತಿಮಠ ಇದ್ದರು.