ಮನೆ ರಾಜ್ಯ ಚುನಾವಣಾ ಬಾಂಡ್ ರಾಜಕೀಯ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ: ಪ್ರಕಾಶ್ ರಾಜ್

ಚುನಾವಣಾ ಬಾಂಡ್ ರಾಜಕೀಯ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ: ಪ್ರಕಾಶ್ ರಾಜ್

0

ಮಂಗಳೂರು: ಚುನಾವಣಾ ಬಾಂಡ್ ರಾಜಕೀಯ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ನಟ, ರಂಗಕರ್ಮಿ ಪ್ರಕಾಶ್ ರಾಜ್ ಅವರು ದೂರಿದ್ದಾರೆ.

ನಗರದಲ್ಲಿ ಸೋಮವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಾಂಡ್ ವಿಷಯದಲ್ಲಿ ಪ್ರಧಾನಮಂತ್ರಿ ಮತ್ತು ಗೃಹಸಚಿವರು ಮೌನ ವಹಿಸಿರುವುದು ಯಾಕೆ ಎಂದು ಪ್ರಶ್ನಿಸಿದರು.

ಚುನಾವಣಾ ಬಾಂಡ್ ಮೂಲಕ ಲೂಟಿ ಮಾಡುತ್ತಿರುವ ವಿಷಯವನ್ನು ‘ಮನ್ ಕಿ ಬಾತ್‌’ನಲ್ಲಿ ಪ್ರಧಾನಮಂತ್ರಿ ಯಾಕೆ ಪ್ರಸ್ತಾಪಿಸುತ್ತಿಲ್ಲ ಎಂದು ಕೇಳಿದರು.

ಬಿಜೆಪಿ ಪಡೆದಿರುವ ಬಾಂಡ್ ಹಣವೆಲ್ಲಾ ಇ.ಡಿ ದಾಳಿಯ ಬಳಿಕ ಸಂಗ್ರಹಿಸಿದ್ದು. ಚುನಾವಣೆಗೆ ಎಂದು ₹ 500 ಕೋಟಿ ಲಂಚ ಕೊಟ್ಟವನಿಗೆ ₹ 2 ಸಾವಿರ ಕೋಟಿ ಮೊತ್ತದ ಗುತ್ತಿಗೆ ನೀಡಿದರೆ ಆ ಗುತ್ತಿಗೆ ಹಣ ಜನರದ್ದಲ್ಲವೇ, ಚುನಾವಣೆಗೆ ಹಣ ಬೇಕು ಎಂದು ದೇಶವನ್ನು ಕೆಡಿಸುವುದು ಸರಿಯೇ  ಎಂದು ಪ್ರಶ್ನಿಸಿದ ಅವರು ಬಿಜೆಪಿಯವರು ಬಾಂಡ್ ಹಣದಲ್ಲೇ ಶಾಸಕರನ್ನು ಖರೀದಿ ಮಾಡಿದ್ದಿರಬೇಕು ಎಂದರು..

ನಾವು ₹ 6000 ಕೋಟಿ ತೆಗೆದುಕೊಂಡಿದ್ದೇವೆ, ಆದರೆ, 330 ಸಂಸದರು ಇದ್ದಾರೆ. ಕಡಿಮೆ ಸಂಸದರು ಇರುವ ಪಕ್ಷಗಳು ಜಾಸ್ತಿ ತೆಗೆದುಕೊಂಡಿದ್ದಾರೆ ಎಂದು ಗೃಹಸಚಿವರು ಹೇಳುತ್ತಾರೆ. ಇದರರ್ಥ ಏನು? ಹೆಚ್ಚು ತೆಗೆದುಕೊಂಡು ಹಂಚಿಕೊಂಡರೆ ಶಿಕ್ಷೆ ಕಡಿಮೆ ಆಗಬೇಕು ಎಂದೇ  ಎಂದ ಅವರು  ಲಾಟರಿ ಏಜೆಂಟ್‌ ಮಾರ್ಟಿನ್‌ನಿಂದ ಚುನಾವಣಾ ಬಾಂಡ್ ಮೂಲಕ ಹಣ ತೆಗೆದುಕೊಂಡಿರುವುದಾಗಿ ಡಿಎಂಕೆಯವರು ಹೇಳಿಕೊಂಡಿದ್ದಾರೆ. ಆದರೆ ಪ್ರಧಾನಮಂತ್ರಿ ಹೇಳದೇ ಇರುವುದು ಸರಿಯಲ್ಲ  ಎಂದರು.

ಲೋಕಸಭೆ ಚುನಾವಣೆಯಲ್ಲಿ ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ‌. ಆಳುವ ಪಕ್ಷವನ್ನು ಪ್ರಶ್ನಿಸುವುದಷ್ಟೆ ನನ್ನ ಕೆಲಸ. ಜನರೂ ಅಷ್ಟೇ, ಪಕ್ಷ ನೋಡಿ ಮತ ಹಾಕಬಾರದು. ನಿಮ್ಮ ಆಶೋತ್ತರಗಳನ್ನು ಈಡೇರಿಸಬಲ್ಲ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸಬೇಕು. ಚುನಾವಣಾ ಸಮೀಕ್ಷೆ ವ್ಯಾಪಾರ ಆಗಿದ್ದು ಹಣ ಕೊಟ್ಟು ಮಾಡಿಸುತ್ತಿದ್ದಾರೆ ಎಂಬ ಸಂದೇಹ ಮೂಡುತ್ತಿದೆ ಎಂದು ಪ್ರಕಾಶ್ ರಾಜ್ ಹೇಳಿದರು.